ಡಾಲ್ಮೆಟಿಯನ್ ಮತ್ತು ಕನ್ನಡ
ಡಾಲ್ಮೆಟಿಯನ್ ಮತ್ತು ಕನ್ನಡ
10 ಜೂನ್ 1898 ರಂದು ಪ್ರಪಂಚದಿಂದ ಒಂದು ಭಾಷೆ ಕಣ್ಮರೆಯಾಗಿ ಹೋಯಿತು. ಅದುವೇ ಡಾಲ್ಮೆಟಿಯನ್ ಭಾಷೆ. ಆ ಭಾಷೆಯನ್ನು ಮಾತನಾಡಲು ಬಲ್ಲವನಾಗಿದ್ದ ಕೊನೆಯ ಒಬ್ಬೇ ಒಬ್ಬ ವ್ಯಕ್ತಿ Tuone Udaina ಎಂಬಾತ ಒಂದು ಗಣಿಯ ಕೆಲಸದಲ್ಲಿ ತೊಡಗಿರುವಾಗ ಅಪಘಾತವಾಗಿ ಮರಣಿಸಿದ. ಅಲ್ಲಿಗೆ ಆ ಭಾಷೆ ನಶಿಸಿಹೋದ ಭಾಷೆಗಳ ಪಟ್ಟಿಗೆ ಸೇರಿಹೋಯಿತು, ಮಾತ್ರವಲ್ಲ ಆ ಭಾಷೆಯೊಂದಿಗೆ ಸೇರಿಕೊಂಡಿದ್ದ ಜನಾಂಗ, ಪ್ರದೇಶ, ಇತಿಹಾಸ ಎಲ್ಲವೂ ಒಂದುರೀತಿಯಲ್ಲಿ ಅಸ್ಪಷ್ಟವಾಗಿ ಉಳಿದುಹೋಯಿತು.
ಇಂದಿನ ಯುರೋಪ್ ನ ಕ್ರೋಷಿಯ ದೇಶ ಮತ್ತು ಅದರ ಅಕ್ಕ ಪಕ್ಕ ಹಲವೆಡೆ ಈ ಭಾಷೆಯನ್ನು ಮಾತನಾಡಲಾಗುತ್ತಿತ್ತೆಂದು ಕೆಲವು ಭಾಷಾತಜ್ಞರ ಅಭಿಪ್ರಾಯ. ಆದರೆ ಆ ಭಾಷೆ ನಾಶವಾದಾಗ ಮುಂದೊಮ್ಮೆ ಅಂತಹುದೊಂದು ಭಾಷೆ ಇತ್ತೆಂಬ ಕುರುಹು ಕೂಡ ಸಿಗದೆ ಹೋಯಿತು. ಒಂದು ಭಾಷೆ ಅದಕ್ಕಂಟಿಕೊಂಡ ಜನಾಂಗ, ಇತಿಹಾಸ ಇವಕ್ಕೆಲ್ಲ ಕೊನೆಯ ಋಜುವಂತಿದ್ದ ಕೊಂಡಿಯೊಂದು ಕಳಚಿಹೋಗುವುದು ಎಂತಹ ದುರಂತ.?
ಇದನ್ನೆಲ್ಲಾ ಹೇಳುತ್ತಿರುವುದಾದರೂ ಯಾತಕ್ಕೆ ಎಂದರೆ ಪ್ರಸ್ತುತ ನಮ್ಮ ಕನ್ನಡ ಕೂಡ ಆ ಸ್ಥಿತಿಗೆ ದೂರ ಉಳಿದಿಲ್ಲ. ಇಂಗ್ಲಿಷ್, ಹಿಂದಿ, ತೆಲುಗುಗಳ ಹಾವಳಿಗೆ ಇಂದು ಕರ್ನಾಟಕದಲ್ಲಿ ಕನ್ನಡ ಮಾತಾನಡುವವರ ಸಂಖ್ಯೆಯೇ ಕಡಿಮೆಯಾಗುತ್ತಾ ಬರುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಕನ್ನಡಕ್ಕಿಂತ ತೆಲುಗು ಹಿಂದಿ ತಮಿಳುಗಳ ಧ್ವನಿಯೇ ಒಮ್ಮೊಮ್ಮೆ ಹೆಚ್ಚು. ಗಡಿ ಪ್ರದೇಶಗಳಲ್ಲಿ ಅವು ಯಾವ ರಾಜ್ಯಕ್ಕೆ ಸೇರಿವೆ ಎಂಬ ಮಟ್ಟಿಗೆ ಇದು ವಿಪರೀತಕ್ಕೆ ಆಗಿ ಹೋಗಿದೆ. ಕೊಡು ಕೊಳ್ಳುವಿಕೆಯೇ ಜೀವಂತ ಭಾಷೆಯ ಲಕ್ಷಣ ಎಂದು ನಾನು ಕೂಡ ಒಪ್ಪಿದ್ದೇನೆ. ಆದರೆ ನಮ್ಮ ನಾಡಿನ ಜನಗಳ ಜೊತೆ ಮಾತನಾಡುವಾಗ ಕೂಡ ಕನ್ನಡದ ಹೊರತಾಗಿ ಬೇರೆ ಭಾಷೆಯಲ್ಲಿ ಮಾತನಾಡುವುದು ನೋವೆನಿಸುತ್ತದೆ.
ಇಂಗ್ಲಿಷ್ ಅನ್ನು ನಮ್ಮ ರಾಜ್ಯದಲ್ಲಿ ಅಲ್ಲದೆ ಹೋದರೂ ಅದನ್ನು ತಾಯ್ನುಡಿಯನ್ನಾಗಿ ಮಾಡಿಕೊಂಡ ಪ್ರಪಂಚದ ಇನ್ನಾವುದೇ ದೇಶ ಅದನ್ನು ಉಳಿಸಿ ಬೆಳೆಸುವ ಅವಕಾಶವಿದೆ. ಹಿಂದಿಗೂ ಸಹ ನಮ್ಮ ರಾಜ್ಯವಲ್ಲದೇ ಹೋದರೂ ಭಾರತದಲ್ಲಿ ಅದನ್ನು ತಾಯ್ನುಡಿಯಾಗಿ ಸ್ವೀಕರಿಸಿದ ಯಾವುದೇ ರಾಜ್ಯದಲ್ಲೂ ಉಳಿದು ಬೆಳೆಯುವ ಅವಕಾಶವಿದೆ. ತಮಿಳು, ತೆಲುಗು, ಮರಾಠಿಗಳಿಗೂ ಅವುಗಳನ್ನು ಉಳಿಸಿ ಬೆಳೆಸುವ ರಾಜ್ಯಗಳಿವೆ. ಆದರೆ ನಮ್ಮಲ್ಲಿ ಆ ಭಾವುಕತೆ ಕಡಿಮೆಯಾಗುತ್ತಿದೆ.
ನಾವೇ ನಮ್ಮ ಭಾಷೆಯನ್ನು ಉಳಿಸಿ ಬೆಳೆಸದೇ ಹೋದರೆ ಅದನ್ನು ಇನ್ನಾರೂ ಉಳಿಸಿ ಬೆಳೆಸಲು ಸಾಧ್ಯ? ಯಾವುದನ್ನೇ ಆಗಲಿ ಬಲವಂತವಾಗಿ ಸ್ಥಾಪಿಸುವುದು ಅಥವಾ ಅಸ್ಥಿತ್ವಕ್ಕೆ ತರಲೆತ್ನಿಸುವುದು ಅಸಾಧ್ಯ, ಅದು ಭಾಷೆಗೂ ಹೊರತಲ್ಲ. ಇಂತಹ ಭಾಷೆಯನ್ನು ಹೋರಾಟ, ಚಳವಳಿಗಳಿಂದ ಉಳಿಸುವುದು ಕಷ್ಟ, ಬದಲಾಗಿ ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ದಿನಬಳಕೆಯ ವಸ್ತುಗಳು, ವ್ಯವಹಾರ ಈ ವಿಧಾನಗಳಲ್ಲಿ ಕನ್ನಡ ಬಳಕೆ ಹೆಚ್ಚುತ್ತಾ ಹೋಗಬೇಕು. ಬಳಸಿದಷ್ಟೂ ಬೆಳೆಯುತ್ತದೆ ಭಾಷೆ.
ಉದಾ.. ಗೆ ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಕನ್ನಡ ಭಾಷೆಯ ಬಳಕೆ, ಇಂಗ್ಲಿಷ್ ನಲ್ಲಿ ಇರುವ ಕೆಲವು ವೈಜ್ಞಾನಿಕ, ತಾಂತ್ರಿಕ ಪದಗಳಿಗೆ ಕನ್ನಡದಲ್ಲಿ ಪರ್ಯಾಯ ಪದಗಳನ್ನು ಹುಡುಕುವ ಇಲ್ಲವಾದಲ್ಲಿ ಸಮರ್ಥ ಪದಗಳನ್ನು ಸೃಷ್ಟಿಸಿಕೊಂಡು ಬಳಸುವಿಕೆ, ಬ್ಯಾಂಕ್, ಕಚೇರಿ ದಾಖಲಾತಿಗಳಲ್ಲಿ ಪತ್ರವ್ಯವಹಾರದಲ್ಲಿ ಕನ್ನಡದಲ್ಲಿ ವ್ಯವಹರಿಸುವಿಕೆ. ಈ ತೆರನಾದ ಚಿಕ್ಕ ಪುಟ್ಟ ವಿಷಯಗಳೇ ಮುಂದೆ ಬೃಹತ್ತಾಗಿ ಬೆಳೆದು ಕನ್ನಡವನ್ನು ಕಾಪಾಡುತ್ತವೆ. ಭಾಷೆ ಬರಿಯ ಮಾತಿಗೂ ಮೀರಿ ಭಾವನಾತ್ಮಕವಾದದ್ದು. ಒಂದು ನೆಲದ, ಜನಾಂಗದ, ಇತಿಹಾಸದ, ಸಂಸ್ಕೃತಿಯ ಕೈಗನ್ನಡಿ ಮತ್ತು ಪ್ರತಿನಿಧಿ. ತೀರಾ ಭಾಷಾ ವ್ಯಾಮೋಹದಿಂದ ನಾನು ಇದನ್ನೆಲ್ಲಾ ಹೇಳುತ್ತಿಲ್ಲ. ನಮ್ಮ ಸೋದರ ಭಾಷೆಗಳೊಂದಿಗೆ ಅನ್ಯೋನ್ಯವಾಗಿ ಬದುಕುವ ಜೊತೆಗೆ ನಮ್ಮ ತನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮಗೆ ಇರಬೇಕೆಂದು ಆಶಿಸುತ್ತಿದ್ದೇನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ