ಬೈರಾಗಿಯ ಹಾಡು
ಬೈರಾಗಿಯ ಹಾಡು “Nature is creative’ ನಿಸರ್ಗ ಸೃಜನಶೀಲವಾದದ್ದು ಎಂಬ ಮಾತಿದೆ. ಹೂ, ಹಣ್ಣು ಹಸಿರು ಎಲೆ, ಪಶುಪಕ್ಷಿ ಗೂಡು ನದಿ ಸಾಗರ ಇವೆಲ್ಲ ಮನುಷ್ಯನ ಅನಾದಿಕಾಲದ ಸವಿಗೆ ಸಡಗರಕ್ಕೆ ಸಂತೋಷಕ್ಕೆ ಲಾಸ್ಯಕ್ಕೆ ವಿಲಾಸವಾಗಿವೆ. ಮನುಷ್ಯನ ಸುತ್ತ ಕಾಡಿದೆ ಹಾಡಿದೆ ಹಕ್ಕಿಗಳ ಕಲರವವಿದೆ ಹೂಗಳ ಸುಗಂಧವಿದೆ. ಇವೆಲ್ಲ ತಮ್ಮ ಪಾಡಿಗೆ ತಾವು ತಮ್ಮ ತಮ್ಮ ಮನೋಧರ್ಮಕ್ಕೆ ಅರಳಿ ಬಾಳಿ ಆಯುಷ್ಯ ಮುಗಿದ ಮರುಕ್ಷಣ ಮರೆಯಾಗುತ್ತವೆ. ಅವ್ಯಾವುಗಳಿಗೂ ಇಂದಿನ ಆಡಂಬರವಿಲ್ಲ ನಾಳೆಯ ಭಯವಿಲ್ಲ, ತಾನು ಇಂದು ಬಾಳಿದ್ದಕ್ಕೆ ಗುರುತುಬಿಟ್ಟು ಹೋಗಬೇಕು ಎಂಬ ಬಯಕೆಯಿಲ್ಲ, ಆದರೆ ಇವೆಲ್ಲವುಗಳನ್ನು ಬಳಸಿ ಅನುಭವಿಸಿ ಆನಂದಿಸುವ ಮನುಷ್ಯನಿಗೆ ಮಾತ್ರ ಅಹಂಕಾರವಿದೆ ಆಡಂಬರವಿದೆ ತಾನು ಶಾಶ್ವತವಾಗಬೇಕೆಂಬ ಹೆಬ್ಬಯಕೆಯಿದೆ. ತನ್ನ ಹೆಸರು ತಾನು ಸತ್ತಮೇಲೂ ಉಳಿಯಬೇಕು ಎಂಬ ಹಂಬಲವಿದೆ, ಅದಕ್ಕಾಗಿ ಅವನು ಇನ್ನಿಲ್ಲದಂತೆ ಹಪಹಪಿಸುತ್ತಾನೆ, ಆದರೆ ನಿಸರ್ಗ ಮಾತ್ರ ನಿರಪೇಕ್ಪವಾಗಿ ನಿರ್ಲಿಪ್ತವಾಗಿ ಹೆಸರಿನ ಹಂಗಿಲ್ಲದೇ ತನ್ನ ಪಾಡಿಗೆ ತಾನು ಬಾಳಿ ಬಯಲಾಗಿ ಹೋಗುತ್ತದೆ. ಇಂಥ ನಿಸರ್ಗವನ್ನು ಅದರ ಮೂಲ ಸ್ವರೂಪದಲ್ಲೇ ಅರಿಯುತ್ತಾ ತನ್ನೊಳಗಿನ ಅಹಮಿಕೆಯನ್ನು ಖಾಲಿಯಾಗಿಸಿಕೊಳ್ಳುವ ಕಾಣ್ಕೆಯಲ್ಲಿ ಹಿಗ್ಗುವ ಬೇಂದ್ರೆ ನಿಸರ್ಗವನ್ನೇ ಬೈರಾಗಿಯಾಗಿಸುತ್ತಾರೆ. ನಿಸರ್ಗದ ಅಂತರಂಗದಲ್ಲಿ ಸುಪ್ತವಾಗಿರುವ ಸ್ಥಿತಪ್ರಜ್ಞ ಪ್ರಶಾಂತ ರಸವನ್ನು ಕವಿ ತಮ್ಮ ಕಾವ್ಯದಲ್ಲಿ ದಾಖಲಿಸುತ್ತಾ, ಪ...