‘ಬೆಳಗು’ ಪದ್ಯದ ಒಂದು ನೋಟ

   ‘ಬೆಳಗು’ ಪದ್ಯದ ಒಂದು ನೋಟ

“ನಾನು ಕಾವ್ಯ ಬರೆಯುವ ಕಾರಣ, ಕಾವ್ಯದ ಮುಖಾಂತರ ಒಳಗಿನ ಅಂಬಿಕಾತನಯನನ್ನು ಮುಟ್ಟುವುದಕ್ಕಾಗಿ ಬೇರಾವ ಉದ್ದೇಶಕ್ಕಾಗಿ ಅಲ್ಲ” “ಬೇಂದ್ರೆ ಬೇರೆ, ಕವಿ ಅಂಬಿಕಾತನಯದತ್ತ ಬೇರೆ” ಬೇಂದ್ರೆಯವರೇ ಹೇಳಿಕೊಂಡ ಈ ಸ್ವಗತ ಅವರ ವಿನೀತ ಭಾವವೋ, ತಮಗೇ ಹೊಳೆದ ಹೊನಲಿನ ಭಾಗ್ಯಕ್ಕೆ ಅವರಿಗೇ ಸಂಕೋಚವೋ ? ತಮ್ಮ ಭಾವ ಸಾಮ್ರಾಜ್ಯದಲ್ಲಿ ಯಾವುದೋ ಶಕ್ತಿಯನ್ನು ಆವಾಹಿಸಿಕೊಂಡು ಬರೆಯುವ ಮಹೋನ್ನತ ಆದರ್ಶವೋ? ಕೀರ್ತಿ ಮೋಹದ ವರ್ಜನೆಯೋ? ಗೊತ್ತಿಲ್ಲ .

ಒಂದು ಶತಮಾನದ ತುಂಬ ವ್ಯಾಪಿಸಿದ, ಕಾಲದ ಗೆರೆದಾಟಿ ಸಾರ್ವಕಾಲಿಕವಾದ ಬೇಂದ್ರೆ ಕನ್ನಡ ಓದುಗರಿಗೆ ಕಾವ್ಯ ರಸಿಕತೆಯ ಪಾಠ ಮಾಡಿದ ಕವಿ. ಬದುಕಿನ ಉನ್ಮತ್ತ ಅಲೆಗಳ ನಡುವೆ ಈಸಿ, ಗಾಳಿಯಲ್ಲಿ ತೇಲಿ ಗಗನದಲ್ಲಿ ವಿಹರಿಸಿ ಗಮ್ಯ ಸೇರುವ ಸರಾಗ ದಾರಿಯಾದ ಕವಿ. ಓದುತ್ತಲೇ ಹಾಡಿಸಿಕೊಳ್ಳುವ ಕವಿತೆಗಳನ್ನು ಬರೆದ ಕವಿ. ಸಂಗೀತ ಸರಸಕ್ಕೆ ಸರಾಗವಾಗಿ ಸರಿಯುವ ಸಾಲುಗಳನ್ನು ಕೊಟ್ಟ ಕವಿ. ಭಾಷೆಯ ಹೆಗಲ ಮೇಲೆ ಕೈ ಹಾಕಿ ಗೆಳೆಯನ ಹಾಗೆ ಸಲಿಗೆಯಿಂದ ಹೊರಟ ಕವಿ. ಭೂಮಿ ಹೃದಯವನ್ನು ಮಾತಿನ ಬೊಗಸೆಯಲ್ಲಿ ಹಿಡಿದ ಕವಿ. ಬೇಂದ್ರೆ ಬಗೆದಷ್ಟೂ ಆಳ, ಹಿಗ್ಗಿಸಿದಷ್ಟೂ ವಿಸ್ತಾರ. 

ಬೇಂದ್ರೆಯವರ ‘ಗರಿ’ ಕವನ ಸಂಕಲನದ ಮೊದಲನೆಯ ಪದ್ಯ “ಬೆಳಗು” 1918ರಿಂದ 1932ರ ನಡುವೆ ಬರೆದ ಪದ್ಯ 

ಮೂಡಲ ಮನೆಯ ಮುತ್ತಿನ ನೀರಿನ 

ಎರಕವಾ ಹೊಯ್ದಾ

ನುಣ್ಣನ್ನೆರಕವಾ ಹೊಯ್ದಾ

ಬಾಗಿಲ ತೆರೆದೂ ಬೆಳಕು ಹರಿದೂ 

ಜಗವೆಲ್ಲಾ ತೋಯ್ದಾ 

ವಿಶ್ವವಲಯಕ್ಕೆ ಬೆಳಕಿನ ವೃಷ್ಠಿ  ಸುರಿದು ಬಂದ ಬೆಳಗು, ಕಾಲರಥದ ಚಕ್ರ ಸರಿದಂತೆ ಸೃಷ್ಠಿಯ ಮಹಾ ಜಾತ್ರೆಯ ಪ್ರತ್ಯಕ್ಷವಾಗುತ್ತದೆ, ಜಾಗರಣೆಯ ನಂತರದ ಬೆಳ್ಳಂಬೆಳಕಿಗೆ ಕಿವಿಯೊಡ್ಡಿ ಕಣ್ಣೊಡ್ಡಿ ಕೂತಿದ್ದ ಲೋಕ, ಆ ಬೆಳಕಿಗಾಗಿ ತೆರೆದ ಮಿಡಿದ ಜಗತ್ತಿನ ಹಿಂದೆ ಅದೇ ಬೆಳಕಿಗೆ ಧ್ಯಾನಿಸಿದ ಪರಮ ಸ್ಥಿತಿಯಿತ್ತಲ್ಲ ಅದು ಕಾಣುವ ತವಕದ ಪರಾಕಾಷ್ಠೆ, ಹೂ ಚಿಗುರು ಹಸಿರುಗಳ ರಸಚಿತ್ರಮಾಲೆಗೆ ಜೀವ ಬಂದದ್ದು ಆ ಬೆಳಕಿನ ಆಗಮನದಿಂದಲೇ, ಕಾವ್ಯ ಕ್ರಿಯೆಗೆ ಎಂಥ ಉದ್ದೀಪನ ರೂಪವೊಂದು ಕವಿಯೆದುರು ಕೂತಿದೆಯಲ್ಲ, ಅದೇ ಕವಿ ಲಹರಿಯ ಗುರಿ, ಅದೇ ಕಣ್ಣಿನಾಚೆಯ ಕಾಣ್ಕೆ. 

ಕಾವ್ಯ ಎಂದರೆ ಕೇವಲ ಶಬ್ಧ ಜಮತ್ಕಾರವಲ್ಲ! ಕೇವಲ ಬೆರಗಲ್ಲ! ಕೇವಲ ಬೆಳಕೂ ಅಲ್ಲ! ಅದು ಇಂದ್ರಿಯಾಚೆಯ ಪ್ರಾಪ್ತಿ ! ಕಣ್ಣೆದುರು ತೆವಳುವ ನಿಸರ್ಗದ ಎಲ್ಲ ತುಣುಕುಗಳು ಅಂತರಾಳಕ್ಕಿಳಿದು ಪ್ರಜ್ಞಾ ಪ್ರಕಾಶಿತ ಸ್ತರ ತಲುಪುತ್ತದೆ, ವಾಚ್ಯದ ಗೆರೆ ದಾಟುತ್ತವೆ, ಅಗೆಯುವ ಸಿದ್ಧಿಗೆ ಸಿಕ್ಕ ನಿಧಿಯಾಗುತ್ತದೆ ಆಗ ಅಂತರಂಗದ ಶಬ್ಧವನ್ನು ಬಹಿರಂಗದ ಶಬ್ಧಗಳು ವಿಸ್ತರಿಸುತ್ತವೆ. 

ರತ್ನದ ರಸದಾ ಕಾರಂಜೀಯೂ 

ಪುಟಪುಟನೇ ಪುಟಿದು 

ಮಘಮಘಿಸುವಾ ಮುಗಿದಾ ಮೊಗ್ಗೀ 

ಪಟಪಟನೇ ಒಡೆದು 

ತಾನೇ ಪಟಪಟನೇ ಒಡೆದು 

ಎಲೆಗಳ ಮೇಲೆ ಹೂಗಳ ಒಳಗೆ 

ಅಮೃತದ ಬಿಂದು 

ಕಂಡವು ಅಮೃತದ ಬಿಂದು 

ಯಾರಿರಿಸಿರುವರು ಮುಗಿಲ ಮೇಲಿಂದಿಲ್ಲಿಗೇ ತಂದು 

ಈಗ ಇಲ್ಲಿಗೇ ತಂದು 

ತಂಗಾಳೀಯಾ ಕೈಯೊಳಗಿರಿಸೀ 

ಎಸಳಿನಾ ಚವರಿ 

ಹೂವಿನ-ಎಸಳೀನಾ ಚವರಿ 

ಹಾರಿಸಿಬಿಟ್ಟರು ತುಂಬಿಯ ದಂಡು 

ಮೈಯೆಲ್ಲಾ ಸವರಿ 

ಗಂಧಾ ಮೈಯೆಲ್ಲಾ ಸವರಿ 

ಆ ದಿವ್ಯ ದ್ಯುತಿ (ಬೆಳಕು) ಎಲ್ಲ ಕಡೆಗೆ ಹರಡಿ ಚೆಲ್ಲಿದ ಕ್ಷಣ ನೆಲಮುಗಿಲುಗಳು ಒಂದರೊಳಗೊಂದು ಸೇರಿಬಿಟ್ಟವು. ಸಂತೋಷ ಸಂಭ್ರಮಗಳು, ಅದೆಷ್ಟು ನಿಸರ್ಗ ವ್ಯಾಪಾರಗಳು ಒಟ್ಟಿಗೇ ಉದ್ಘಾಟನೆಯಾಗಿಬಿಟ್ಟವು. ಪುಷ್ಪ ಸೌರಭಕ್ಕೆ ಮನಸೋತು ಮಧುರಸಕ್ಕೆ ಹಾತೊರೆದು ಹಾರಿದ ದುಂಬಿಯ ಅವಸರ, ಶಿಶಿರದ ಸಂಕೋಲೆಯಿಂದ ಬಿಡಿಸಿಕೊಂಡು ಓಡಿ ಬಂದ ಚೈತ್ರ, ಶಿಲಾಹೃದಯವನ್ನೂ ತನ್ನ ಮೋಹಪಾಶದಿಂದ ಮೃದುವಾಗಿಸಿದ ಯೌವನ, ಬೆಳಕಿಗಾಗಿ ಕಾದು ಕಾದು ಬೆಳಕು ಬಂದೊಡನೆ ಅಪ್ಪಿ ಅದೃಶ್ಯವಾದ ಕತ್ತಲು, ಹುಟ್ಟಿದೂರಿಗೆ ತಿರುಗಿ ಬಂದ ಮಳೆ, ಮಳೆಯಿಂದ ತನಗಾದ ಆನಂದವನ್ನು ಘಮದಲ್ಲಿ ಹಬ್ಬಿಸಿದ ಇಳೆ, ಸದ್ದಿಲ್ಲದೇ ಹೂವಾದ ಮೊಗ್ಗು ಒಂದೇ ಎರಡೇ ಅನಂತ ಚಲನೆಯ ಲೀಲಾಜಾಲ. ಕವಿತೆಯ ವೈಭವಕ್ಕೆ ವೈವಿಧ್ಯತೆಗೆ ಅದೆಷ್ಟು ಪ್ರತಿರೂಪಗಳು ಜೀವಂತವಾಗುತ್ತವಲ್ಲ! 

ಯುಗಾಂತರಗಳಿಂದ ಹರಿದು ಬಂದ ಈ ಸಹಜ ಸತ್ಯವನ್ನು ಹೊಸ ಅನುಭವಕ್ಕೆ ಬಾಗಿಲಾಗಿಸುವ ಬೇಂದ್ರೆ ಇದರ ಜೊತೆಗೆ ಕಲೋಪಾಸನೆಯ ರಹಸ್ಯವನ್ನೂ ಕಲಿಸುತ್ತಾರೆ. ಸ್ಮೃತಿಚಿತ್ರಗಳನ್ನು ಪ್ರಚೋದಿಸಿ ಪ್ರಕಾಶವಾಗುವ ಬಗೆಯನ್ನೂ ಹೇಳುತ್ತಾರೆ. ಆಂತರಿಕ ಸತ್ಯದ ಬಹಿರ್‍ದರ್ಶನವೆಂದರೆ ಇದೇ ಇರಬೇಕು. “ಪುಟಪುಟನೇ ಪುಟಿದು” ಎಂಬುದು ಶಬ್ದವಲ್ಲ. ಅರಳುವ ಬಾಳ ಬಯಸುವ ಬೆಳಕು ಕಾಣುವ ಆತುರ. 

ಗಿಡಗಂಟೆಗಳ ಕೊರಳೊಳಗಿಂದ 

ಹಕ್ಕಿಗಳಾ ಹಾಡು 

ಗಂಧರ್ವರಾ ಸೀಮೆಯಾಯಿತು 

ಕಾಡಿನಾ ನಾಡು 

ಕ್ಷಣದೊಳು ಕಾಡಿನಾ ನಾನು 

ಭಿನ್ನ ಪ್ರತಿಮೆಗಳ ಪರಿಪಾಕ, ಒಂದಕ್ಕೊಂದು ಅನ್ಯೋನ್ಯ ಸಂಬಂಧ, ಒಂದು ಕ್ರಿಯೆಗೆ ಒಂದು ದೃಶ್ಯ. ಪ್ರತಿ ಚಲನೆಯಲ್ಲಿ ಒಂದು ರೂಪ. ಕಾಣಬಲ್ಲವನಿಗಷ್ಟೆ ಕಂಡ ಕಾವ್ಯ. ಈ ಕಾವ್ಯದಲ್ಲಿ ಕಾಣುವ ಜೀವಂತಿಕೆಯ ಮಿಡುಕಾಟ ಕೃತಾರ್ಥ ಭಾವ ಮತ್ತು ಅನುಭವಿಸಿದ ಅನುಭೂತಿಗೆ ಶಬ್ಧವೂ ಸಾಲದೇ ಹೋಗುತ್ತದೆ. ಸಿದ್ಧಿಸಿದ ರಸಾನುಭೂತಿಯ ಭಾರ ಹೊರದೇ ಪದಗಳು ಪರದೇಸಿಯಾಗುತ್ತವೆ. ನಿಸರ್ಗದ ಮೈಯನ್ನೆಲ್ಲಾ ತಬ್ಬಿ ತಡವಿಬಿಡುವ ದಾಹ ಬೆಳಕಿಗಿದ್ದರೆ ತಬ್ಬಿಸಿಕೊಳ್ಳುವ ಆಸೆ ನಿಸರ್ಗಕ್ಕೂ ಇದೆ. ಈ ಎರಡರ ಪ್ರಣಯ ಕಾತುರವನ್ನು ಕಾಣುವ ಕವಿಗೆ ಎಳೆಹರೆಯದ ಮುಗ್ಧ ಕೌತುಕವಿದೆ. ಇಂದ್ರಿಯಾಭಿಲಾಷೆಯನ್ನು ತಣಿಸಿಕೊಂಡ ಕ್ಷಣವದು. 

ಅರಿಯದೆ ಆಳವು ತಿಳಿಯದ ಮನವು 

ಕಾಣದೋ ಬಣ್ಣ

ಕಣ್ಣಿಗೆ ಕಾಣದೋ ಬಣ್ಣಾ

ಶಾಂತಿರಸವೇ ಪ್ರೀತಿಯಿಂದಾ 

ಮೈದೋರಿತಣ್ಣಾ

ಇದು ಬರೀ ಬೆಳಗಲ್ಲೋ ಅಣ್ಣಾ !

ಇಲ್ಲಿಯವರೆವಿಗೆ ಬೆಳಗೆಂದೇ ಹೇಳಿ ಈಗ ಕೊನೆಯಲ್ಲಿ “ಇದು ಬರೀ ಬೆಳಗಲ್ಲೋ  ಅಣ್ಣಾ!”ಅಂದದ್ದೇಕೆ ? ಇದು ಮೂರ್ತದ ವ್ಯಾವಹಾರಿಕ ಪರಿಧಿ ದಾಟಿದ ಅಮೂರ್ತತೆಯೇ ? ಬಾಹ್ಯ ಜಗತ್ತಿನ ನಿರ್ಗಮನವೇ ? ಪ್ರಫುಲ್ಲಿತ ಭ್ರಮೆಯೊಂದರ ಬಲೆಯಿಂದ ಬಿಡಿಸಿಕೊಂಡ ಪ್ರವಾದಿಮಾರ್ಗವೇ ? ಅಥವಾ ಇದಾವುದೂ ಅಲ್ಲವೇ ? ಬೆಳಕಿಗಷ್ಟೇ ಪರವಶವಾಗಿ ಅದು ಕೊಡಬಹುದಾದ ಅರ್ಥ ಕಳೆದುಕೊಳ್ಳಲು ಕವಿಯಂತೂ ತಯಾರಿಲ್ಲ. ಬದುಕನ್ನು ಅದರ ಬಯಕೆಯನ್ನು ಅದರ ಕಸಿವಿಸಿಯನ್ನು ಕವಿ ಕಡೆಗಣಿಸುವುದಿಲ್ಲ. ಹಾಗೆಯೇ ಬದುಕಿನ ಆದರ ಹಾಸ್ಯ ವಿನೋದ ಶೃಂಗಾರವನ್ನೂ ಅನುಭವಿಸದೇ ಬಿಡುವುದಿಲ್ಲ ಮತ್ತು ತಮದಿಂದ ಕಳಚಿಕೊಂಡು ಬೆಳಕಿನ ಕೈ ಹಿಡಿಯಲೂ ಮರೆಯುವುದಿಲ್ಲ. 

“ತಮಸೋ ಮಾ ಜ್ಯೋತಿರ್ಗಮಯ”. ಕತ್ತಲೆಯ ಕಷ್ಟ, ಬೆಳಕಿನ ಅನಿವಾರ್ಯತೆಗಳೆರಡೂ ಒಳಹೊರಗುಗಳ ಚಿರಂತನ ಕಲಹವಾಗಿಯೇ ಅಂತರಂಗದ ವಿಕಾಸಕ್ಕೆ ಕಾರಣವಾಗುತ್ತದೆ. ಕೊನೆಯದಾಗಿ ಒಂದು ಪ್ರಶ್ನೆ. “ಬೆಳಗು” ಎಂಬುದು ಕ್ರಿಯಾಪದವೇ ? ನಾಮಪದವೇ ? ಉತ್ತರ. ಇದು ಕ್ರಿಯಾಪದವೂ ಹೌದು ನಾಮಪದವೂ ಹೌದು. ಕ್ರಿಯಾಪದವಾದಾಗ ‘ಪ್ರಾರ್ಥನೆ’ ನಾಮಪದವಾದಾಗ “ಉತ್ಕಟವಾದ ಭಾವನೆ”.


ಶ್ರೀ ಕೆ.ವಿ.ವೆಂಕಟೇಶಮೂರ್ತಿ 

ಎಂ.ಎ. ಇಂಗ್ಲೀಷ್ ಉಪನ್ಯಾಸಕರು, ಚಳ್ಳಕೆರೆ.

ಕಾಮೆಂಟ್‌ಗಳು