ಬೈರಾಗಿಯ ಹಾಡು

 ಬೈರಾಗಿಯ ಹಾಡು

“Nature is creative’ ನಿಸರ್ಗ ಸೃಜನಶೀಲವಾದದ್ದು ಎಂಬ ಮಾತಿದೆ. ಹೂ, ಹಣ್ಣು ಹಸಿರು ಎಲೆ, ಪಶುಪಕ್ಷಿ ಗೂಡು ನದಿ ಸಾಗರ ಇವೆಲ್ಲ ಮನುಷ್ಯನ ಅನಾದಿಕಾಲದ ಸವಿಗೆ ಸಡಗರಕ್ಕೆ ಸಂತೋಷಕ್ಕೆ ಲಾಸ್ಯಕ್ಕೆ ವಿಲಾಸವಾಗಿವೆ. ಮನುಷ್ಯನ ಸುತ್ತ ಕಾಡಿದೆ ಹಾಡಿದೆ ಹಕ್ಕಿಗಳ ಕಲರವವಿದೆ ಹೂಗಳ ಸುಗಂಧವಿದೆ. ಇವೆಲ್ಲ ತಮ್ಮ ಪಾಡಿಗೆ ತಾವು ತಮ್ಮ ತಮ್ಮ ಮನೋಧರ್ಮಕ್ಕೆ ಅರಳಿ ಬಾಳಿ ಆಯುಷ್ಯ ಮುಗಿದ ಮರುಕ್ಷಣ ಮರೆಯಾಗುತ್ತವೆ. ಅವ್ಯಾವುಗಳಿಗೂ ಇಂದಿನ ಆಡಂಬರವಿಲ್ಲ ನಾಳೆಯ ಭಯವಿಲ್ಲ, ತಾನು ಇಂದು ಬಾಳಿದ್ದಕ್ಕೆ ಗುರುತುಬಿಟ್ಟು ಹೋಗಬೇಕು ಎಂಬ ಬಯಕೆಯಿಲ್ಲ, ಆದರೆ ಇವೆಲ್ಲವುಗಳನ್ನು ಬಳಸಿ ಅನುಭವಿಸಿ ಆನಂದಿಸುವ ಮನುಷ್ಯನಿಗೆ ಮಾತ್ರ ಅಹಂಕಾರವಿದೆ ಆಡಂಬರವಿದೆ ತಾನು ಶಾಶ್ವತವಾಗಬೇಕೆಂಬ ಹೆಬ್ಬಯಕೆಯಿದೆ. ತನ್ನ ಹೆಸರು ತಾನು ಸತ್ತಮೇಲೂ ಉಳಿಯಬೇಕು ಎಂಬ ಹಂಬಲವಿದೆ, ಅದಕ್ಕಾಗಿ ಅವನು ಇನ್ನಿಲ್ಲದಂತೆ ಹಪಹಪಿಸುತ್ತಾನೆ, ಆದರೆ ನಿಸರ್ಗ ಮಾತ್ರ ನಿರಪೇಕ್ಪವಾಗಿ ನಿರ್ಲಿಪ್ತವಾಗಿ ಹೆಸರಿನ ಹಂಗಿಲ್ಲದೇ ತನ್ನ ಪಾಡಿಗೆ ತಾನು ಬಾಳಿ ಬಯಲಾಗಿ ಹೋಗುತ್ತದೆ. 

ಇಂಥ ನಿಸರ್ಗವನ್ನು ಅದರ ಮೂಲ ಸ್ವರೂಪದಲ್ಲೇ ಅರಿಯುತ್ತಾ ತನ್ನೊಳಗಿನ ಅಹಮಿಕೆಯನ್ನು ಖಾಲಿಯಾಗಿಸಿಕೊಳ್ಳುವ ಕಾಣ್ಕೆಯಲ್ಲಿ ಹಿಗ್ಗುವ ಬೇಂದ್ರೆ ನಿಸರ್ಗವನ್ನೇ ಬೈರಾಗಿಯಾಗಿಸುತ್ತಾರೆ. ನಿಸರ್ಗದ ಅಂತರಂಗದಲ್ಲಿ ಸುಪ್ತವಾಗಿರುವ ಸ್ಥಿತಪ್ರಜ್ಞ ಪ್ರಶಾಂತ ರಸವನ್ನು ಕವಿ ತಮ್ಮ ಕಾವ್ಯದಲ್ಲಿ ದಾಖಲಿಸುತ್ತಾ, ಪ್ರಕೃತಿ ಮಡಿಲಿಗೆ ಹಾತೊರೆಯಬೇಕಾದ ಅನಿವಾರ್ಯ ಸಂದೇಶವನ್ನು ಕೊಡುತ್ತಾರೆ. ಎಲ್ಲಿಯೂ ನಿಲ್ಲದ, ಊರಿಂದೂರಿಗೆ ಅಲೆಯುವ, ಜಗತ್ತಿನ ವಿಲಾಸ ವೈಭವವನ್ನು ನಿರ್ಭಾವುಕವಾಗಿ ನೋಡುವ, ಭಿಕ್ಷೆ ಸಿಕ್ಕ ತಕ್ಷಣ ತಿಂದು ತೃಪ್ತಿಗೆ ಜಾರಿ ಇಹ ಮರೆತು ನಿದ್ರಿಸುವ ನಿರಾಳ ಸ್ಥಿತಿಯ ಬೈರಾಗಿಗೆ ನಿಸರ್ಗವನ್ನು ಹೋಲಿಸಿರುವುದು ಒಂದು ಅಪರೂಪದ ಚಿತ್ರ. 

ನಿಸರ್ಗದ ಆಪ್ತತೆಗೆ ಹಾತೊರೆದಾಗ ಮಾತ್ರ ಇಂಥ ದಿವ್ಯಾನುಭವ ಸಾಧ್ಯ. ಪ್ರಪಂಚದ ಕಾಮ ಕ್ರೋಧದ ಉನ್ಮತ್ತ ನಿಷ್ಕರುಣೆಗೆ ನಿಸರ್ಗದಲ್ಲ ಸಿಕ್ಕ ಸ್ಫುಟವಾದ ನಿರ್ಗಮನ ಮಾರ್ಗವಿದು. ಲೋಕ ಸುಡುವ ಬೆಂಕಿಯಿಂದ ಪಾರಾಗಿಸುವ ಕಾವ್ಯ, ಕೈಹಿಡಿದು ನಿಸರ್ಗದ ತಂಪಿಗೆ ಕರೆದೊಯ್ಯುತ್ತದೆ. ಹೊರ ಅಂಗಳದ ಗಾಳಿ, ಗಗನ, ಬಯಲಿನಲ್ಲಿ ತೇಲಿ ಹೋಗುವ ಬೇಂದ್ರೆ ನಿಸರ್ಗ ಕೊಡುವ ಇಂಥ ತಂಪಿಗೆ ಕೈಯೊಡ್ಡುತ್ತಾರೆ. ಇದು ಸಮಷ್ಠಿ ಅನುಭವದ ಸಂವೇದನೆಯೂ ಹೌದು, ಬಿಡುಗಡೆ ಬೇಕೆಂಬುವವಗೆ ಭೂಮಿಯೇ ಸ್ಪೂರ್ತಿಯಾಗಿ ಬೋಧೆಯಾಗಿ ಅನ್ವೇಷಣೆಯ ಬೆಳಕಾಗಿ ಬಿಡುತ್ತದೆ ಎಂಬ ನಂಬಿಕೆ ಬೇಂದ್ರೆಯವರದು. ಅವರು ನಿಸರ್ಗದ ಸಾವಿರ ಸ್ವರಗಳಿಗೆ ಕಿವಿಯಾಗುತ್ತಲೇ ಪರಮರಮಣೀಯ ದೃಶ್ಯಗಳಿಗೆ ಮನಸೋಲುತ್ತಲೇ ಒಳಗನ್ನು ಎಚ್ಚರಿಸಿಕೊಳ್ಳುತ್ತಾರೆ. 

ಬೇಂದ್ರೆಯವರ ಸಖೀಗೀತ ದ 29ನೆಯ ಪದ್ಯ ‘ಬೈರಾಗಿಯ ಹಾಡು’. 

ಇಕೋ ನೆಲ ಅಕೋ ಜಲ 

ಅದರ ಮೇಲೆ ಮರದ ಫಲ 

ಮನದೊಳಿದೆ ಪಡೆವ ಛಲ 

ಬೆಳವಗೆ ನೆಲವೆಲ್ಲ ಹೊಲ 

ಜಲಧಿವರೆಗೆ ಒಂದೆ ಕುಲ 

ಅನ್ನವೇ ಧರ್ಮದ ಮೂಲ 

ಪ್ರೀತಿಯೆ ಮೋಕ್ಷಕೆ ಬಲ 

ಇದೇ ಶೀಲ ಸರ್ವಕಾಲ. 

ಕೇವಲ ಎಂಟೇ ಸಾಲಿನ ಪದ್ಯ. ನಿಸರ್ಗವೇ ದಿವ್ಯಕ್ಕೆ ದಾರಿ ಎಂದು ತೋರಿಸುತ್ತಲೇ ನಿಷ್ಕ್ರಮಣ. ಭಾಗ್ಯವನ್ನೂ ಉದ್ಧಾರ ಪಥವನ್ನೂ ಲೋಕ ವಿಕಾಸದ ಆಶಯವನ್ನೂ ಮನವರಿಕೆ ಮಾಡುತ್ತಾರೆ ಬೇಂದ್ರೆ. ಮರದ ಮೇಲಿನ ಫಲಕ್ಕೆ ಮೂಲಧಾರವಾದದ್ದು ನೆಲ ಮತ್ತು ಜಲ. ಜೀವಿಗಳ ಹುಟ್ಟು ಸಾವಿಗೆ ಗುರಿ ಹೆಗ್ಗುರಿಗೆ ಬದುಕು ಬಾಳಿನಾಟಕ್ಕೆ ನೆಲವೇ ಮೂಲ. ಮಣ್ಣು ಮೈಗಂಟದೇ ಮುಗಿಲೇರಲು ಸಾಧ್ಯವಿಲ್ಲ. ಜಲ ಹೀರದೇ ಬಾನಲ್ಲಿ ಹಗುರಾಗಲು ಸಾಧ್ಯವಿಲ್ಲ. ಪುರಷೋತ್ತಮನಾದವನ ಪೂರ್ವ ಚರಿತ್ರೆಯಲ್ಲೂ ಮಣ್ಣಿದೆ ನೀರಿದೆ, ಇವರೆಡರ ಸಂಯೋಗದಲ್ಲಿ ಫಲವಿದೆ. ಅಂದರೆ ಜೀವಧಾತುವಿಲ್ಲದೇ ಜೀವವಿಲ್ಲ ಅಲ್ಲವೇ ? ಇಂದ್ರಿಯಗ್ರಾಹ್ಯವಾಗಿ ಸಹಜವಾಗಿ ಕಾಯುತ್ತಲೇ ಜೈವಿಕ ಘಟನೆಯೊಂದು ನಿಧಾನವಾಗಿ ಕಾಲವಿಕಾಸದ ಪಥವಾಗುತ್ತದೆ. ಸಂಕಲ್ಪ ಬಲದವನ ಛಲವಾಗಿ, ಸೆಳೆತಕ್ಕೆ ಸಿಕ್ಕವನಿಗೆ ಹೊಲವಾಗಿ ಭಾವಿಸುವವಗೆ ಒಂದೆ ಕುಲವಾಗಿ ವ್ಯಕ್ತವಾಗುತ್ತದೆ. ವ್ರತಸ್ಥನಾದವನೊಬ್ಬನ ಒಳಗಿನ ಸ್ಫೋಟವಿದು. ಸಂಕಟಕ್ಕೆ ಮಿಡಿಯುವವನ ಮೋಕ್ಷವೇ ಇದು. ಮನುಷ್ಯನಾಗಲಿಕ್ಕೆ ಆಧ್ಯಾತ್ಮಿಯಾಗಬೇಕಿಲ್ಲ, ಸ್ಪಷ್ಠ ಸಾಮಾಜಿಕವಾಗಿದ್ದರೆ ಸಾಕು. ಕವಿಯೊಳಗಿನ ಏಕಾಗ್ರತೆಯೇ ಇದು. ಅವನೊಳಗಿನ ಮೋಹಕ ಏಕಾಗ್ರತೆಯ ಮೌನ ಮಾತಾದಾಗ ಅದು ಕಾವ್ಯವಾಗುತ್ತದೆ.

‘ಇದೇ ಶೀಲ ಸರ್ವಕಾಲ’ ಎಂಬ ಕೊನೆ ಸಾಲಲ್ಲಿ ಘನವನ್ನು ಬಯಸುವ ಆಕಾಂಕ್ಷೆಯಿದೆಯೇ ವಿನಹ ಆ ಕ್ಷಣದ ಸಂವಹನವಾಗಿ ನಂತರ ತ್ಯಜಿಸಿ ಹೋಗುವ ಭಾವವಿಲ್ಲ, ಭಾವುಕ ಸ್ಥಿತಿಯ ಅಭಿವ್ಯಕ್ತಿಯೂ ಅಲ್ಲ. ಇದು ಶಬ್ದ ಹಿಗ್ಗಿಸಿ ಹೊಸ ಅರ್ಥಕ್ಕೆ ಹೊಸ ಆಲೋಚನೆಗೆ ಸಜ್ಜು ಮಾಡುವ ಪವಾಡವಾಗುತ್ತದೆ. ಆರ್ಥದ ಹಲವು ಸಾಧ್ಯತೆಗಳಿಗೆ ಶಬ್ಧ ಶ್ರಮವೊಂದೇ ಸಾಲದು ಅದಕ್ಕೆ ಭಾವವೂ ಬೇಕು, ಪ್ರಜ್ಞೆ ಬೇರೂರಬೇಕು. ಆ ಪ್ರಜ್ಞೆಯ ಮೂಲವೇ ನೆಲ, ಜಲ, ಫಲ, ಕುಲ, ಬಲ. ಸಮಷ್ಠಿಯನ್ನು ವಿಸ್ತರಿಸುವ ಮೂಲವೇ ಅದು. ತನ್ನೊಳಗಿನ ಅಂತರಂಗವನ್ನು ತಾನೇ ಕೇಳಿಸಿಕೊಳ್ಳದೇ ಹೋದರೆ ಜನಜಂಗುಳಿಯನ್ನು ಕೇಳಿಸಿಕೊಳ್ಳಲಾದೀತೇ ? ತನ್ನನ್ನು ತಾನೇ ಕೇಳಿಸಿಕೊಂಡವನು ಕವಿಯಾಗುತ್ತಾನೆ. 

ಬೇಂದ್ರೆ ಅಂತರಂಗಕ್ಕೆ ಪ್ರತಿಧ್ವನಿಯಾದ ಪ್ರಸಿದ್ಧ ಕವಿ. ಕವಿತೆಯ ವಸ್ತುವಿಶಾಲತೆಯಲ್ಲಿ ಅನೇಕ ಆಲೋಚನೆಗಳು ಬಳ್ಳಿಯಾಗಿ ಹಬ್ಬಿವೆ. ಅವೆಲ್ಲವೂ ಜೀವನ ಶ್ರದ್ಧೆಯ ಬೇರಲ್ಲಿ ಸಂಬಂಧ ಹೊಂದಿವೆ. ಪ್ರಪಂಚಕ್ಕೆ ಇಂಥ ದಿವ್ಯ ಕಾವ್ಯವನ್ನು ದಾನ ಮಾಡಿದ ಕವಿ ಸಾಹಿತ್ಯವನ್ನಷ್ಟೇ ಮನಸ್ಸಿನಲ್ಲಿಟ್ಟುಕೊಂಡಿಲ್ಲ. ಸಮಗ್ರ ನಾಗರಿಕತೆಯ ಸುಖಕ್ಕೆ ತವಕಿಸುತ್ತಾರೆ, ಇದೇ ಅಲ್ಲವೇ “inward loyalty to the happiness of the world?.

ಶ್ರೀ ಕೆ.ವಿ.ವೆಂಕಟೇಶಮೂರ್ತಿ 

ಎಂ.ಎ. ಇಂಗ್ಲೀಷ್ ಉಪನ್ಯಾಸಕರು, ಚಳ್ಳಕೆರೆ.

ಕಾಮೆಂಟ್‌ಗಳು