‘ಪುಟ್ಟ ವಿಧವೆ’ ಒಂದು ಅಭಿಪ್ರಾಯ

  ‘ಪುಟ್ಟ ವಿಧವೆ’ ಒಂದು ಅಭಿಪ್ರಾಯ 

ಕವಿ ಬೇಂದ್ರೆ ಬದುಕಿನ ಎಲ್ಲ ಎಲ್ಲೆಗಳಿಗೆ ಸ್ವಚ್ಛಂದವಾಗಿ ವಿಹರಿಸಿದವರು. ಮನುಷ್ಯ ಪ್ರಪಂಚದ ಘರ್ಷಣೆಯನ್ನು ಘನತೆಯನ್ನು ವಿವರಿಸುತ್ತಲೇ ಮನುಷ್ಯ ಸಂಬಂಧವನ್ನು ಸೂಕ್ಷ್ಮವಾಗಿ ಅವಲೋಕಿಸಿದವರು. ಅವರ ಬದುಕಿನ ಮೇಲೆ ವಿಧಿಯ ವಕ್ರನೋಟ ಬಿದ್ದರೂ ಆಂತರ್ಯದಲ್ಲಿ ಕಲ್ಲೋಲಗಳಿದ್ದರೂ ಓದುಗರಿಗೆ ಕಲ್ಲು ಸಕ್ಕರೆ ಕೊಟ್ಟವರು. ದೌರ್ಭಾಗ್ಯ ಬಂದು ಬಾಗಿಲಲ್ಲಿ ನಿಂತರೂ ಜಗತ್ತಿಗೆ ಸೌಭಾಗ್ಯ ಹಾರೈಸಿದವರು. ಯಾತನೆಗೆ, ವಿಷಾದಕ್ಕೆ, ಸಂಕಟಕ್ಕೆ ಅಚಲರಾದವರು. 

ಬೇಂದ್ರೆಯವರ ‘ಸಖೀಗೀತ’ ಕವನ ಸಂಕಲನದಲ್ಲಿ ‘ಪುಟ್ಟ ವಿಧವೆ’ ಎಂಬ ಪದ್ಯವಿದೆ. 

ಬಾಳಾಗ್ನಿಯಲ್ಲಿ ಬಿದ್ದು ಸುಟ್ಟು ಹೋದವಳ ಕಥೆ. ಎಳೆಯ ಬಾಳಲ್ಲೇ ಭಾರ ಹೊತ್ತವಳು. ಹೂ ಉದುರಿ ಬರಿದಾದ ಬಳ್ಳಿಯಾದವಳು. ವಿಧಿಯ ಕಠೋರ ಕಪಟಕ್ಕೆ ಸಿಕ್ಕಿದವಳು, ದುಃಖಾಲಾಪಾದ ಸ್ವರಸ್ವರವನ್ನು ಎಳೆದು ಎಳೆದು ತನ್ನೊಳಗೆ ತಾನೇ ಹಾಡಿಕೊಂಡವಳು. ಸಂತೋಷದ ನಶ್ವರ ಅವಧಿಯ ಪ್ರತಿನಿಧಿಯಾದವಳು. 

ಪದ್ಯದ ಹೆಸರೇ ಸೂಚಿಸುವಂತೆ, ಅವಳು ಸಣ್ಣ ವಯಸ್ಸಿನಲ್ಲೇ ವಿಧವೆಯಾದವಳು. ಸಣ್ಣ ವಯಸ್ಸು ಸಾಗಿ ಮಾಗುವ ಮುನ್ನವೇ ದಾಂಪತ್ಯದ ಎಲ್ಲ ಫಲವನ್ನು ಪಡೆದುಕೊಂಡವಳು, ಮದುವೆ ಏನೆಂದು ಗೊತ್ತಾಗದ ವಯಸ್ಸಿನಲ್ಲಿಯೇ ಮದುವೆಯಾದವಳು. ಅವನೂ ಅಷ್ಟೇ.

ಆಕೆಯಿದ್ದಳು ಕೂಸು ಈತನಿನ್ನೂ ಹುಡುಗ 

ಅವರ ತಾಯ್ತಂದೆಗಳ ಹಿಗ್ಗು ಎಷ್ಟು ! 

ಧರ್ಮದಾ ಹೆಸರಿನಲ್ಲಿ ಅವರ ಕೈಕೊಡಿಸಲು 

ಇವರಿಗೆಸಿತು ಹಬ್ಬದಷ್ಟು ! 

ಆಟವಾಡುವ ವಯಸ್ಸು, ಆಟ ನಿಲ್ಲಿಸುವ ಮುಂಚೆಯೇ ಮದುವೆ ಮುಗಿಸಿದೆವು ಎಂದು ಅಪ್ಪ ಅಮ್ಮ ಹೇಳುತ್ತಾ ಮುಕ್ತಿ ಪಡೆದ ಕಾಲವದು. ಧರ್ಮವನ್ನು ಬಿಡದ ಕಾಲ. ಸಮಾಜ ನಿಷ್ಠ, ಸಂಪ್ರದಾಯನಿಷ್ಠ ಕಾಲವದು. ಇಡೀ ಬದುಕು ಸಂಪ್ರದಾಯದ ನೆರಳಲ್ಲೇ ಸಂಭವಿಸಬೇಕು. ಶಾಸ್ತ್ರ್ಯಕ್ಕೆ ನೇತು ಬಿದ್ದ ಬಾಳು. ಧರ್ಮವನ್ನು ಅಲಕ್ಷಿಸಿದರೇ ಜೀವವಿಸರ್ಜನೆಯ ಹಿಂಸೆ. ಹೊಸ ಗಾಳಿ ಎಂದೂ ಉಸಿರಾಡದ, ಉಸಿರಾಡಬಾರದೆಂಬ ಶ್ರದ್ಧೆ, ಅದೇ ಪಾರಮಾರ್ಥ, ಅದೇ ಪೂರ್ವಾರ್ಜಿತ ಸಾಂತ್ವನ, ಪ್ರಾಂಜಲವಾಗಿ ಒಪ್ಪಿಕೊಂಡ ಪರಂಪರೆಯ ಪ್ರಶಾಂತ ಭಾವ. ಅಂಥ ಸಂಪ್ರದಾಯವನ್ನು ಈ ಪದ್ಯದಲ್ಲಿ 

ಕವಿ ಸಂಕಟಪಡುತ್ತಾ ನೋಯುತ್ತಾ ಸೆರೆಹಿಡಿಯುತ್ತಾರೆ. ‘ಎರಡು ಮತ್ತು ನಾಲ್ಕನೇ’ ಸಾಲಿನಲ್ಲಿನ ಆಶ್ಚರ್ಯ ಸೂಚಕ ಚಿಹ್ನೆಯಲ್ಲಿ ತಮ್ಮ ನೋವನ್ನು ಅಡಗಿಸಿಡುತ್ತಾರೆ. ಅವರ ಭಾವತೀವ್ರತೆಯ ‘high volume’ ನ ಸೂಚನೆ ಇದು. ಇಂದು ನಿನ್ನೆಗಳ ಜೊತೆ ಅನ್ಯೋನ್ಯ ಸಂಬಂಧ ಬೆಳೆಸುತ್ತಲೇ ಎರಡನ್ನೂ ವೈಚಾರಿಕತೆಯ ಕಣ್ಣಿಂದ ನೋಡದೇ ಹೋದರೆ, ಇಂಥ ಸ್ಪಂದನ ಸಾಧ್ಯವಿಲ್ಲ. ಪ್ರಾಚೀನತೆ ಮತ್ತು ಆಧುನಿಕತೆಯ ನಿಕಟ ಒಡನಾಟದಲ್ಲಿ ಈ ರೀತಿಯ ಹೊಸ ಆಲೋಚನೆ ಸಾಧ್ಯ. 

ಕೊರಳ ಕರಿಮಣೆ ಗಲ್ಲದರಿಷಿಣವು ಮುಗಬೊಟ್ಟು

ಆ ಮೇಲೆ ಉದ್ದು ಕುಂಕುಮದ ಅಂದ ! 

ಆ ಪುಟ್ಟ ಮುತ್ತೈದೆ ಪುಟ್ಟ ಪುಟನೆ ನೆಗೆದಾಡೆ 

ಅಷ್ಟೆ ಕಂಡಿತು ಕಣ್ಣಿಗೆಷ್ಟೊ ಚಂದ ! 

ಆಕೆ ದೊಡ್ಡವಳಾಗಿ, ಈತ ಚಿಕ್ಕವನಿದ್ದು

ಶೋಭನವ ಮಾಡಿದ್ದು ಊರಿಗಾಟ ! 

ಪೆಚ್ಚು ಮೋರೆಯ ಅಳಿಯ-ದೇವರಿದಿರಲಿ ಜನಕೆ 

ಕಡಿಮೆ ಸಹಿಯೆನಿಸಿತ್ತೆ ಪ್ರಸ್ತದೂಟ ? 

ಅವಳಿಗೆ ‘ಕರಿಮಣಿ’ ಕೊರಳ ಆಟಿಕೆ ಅಷ್ಟೆ. ಅರಿಷಿಣ, ಕುಂಕುಮ, ಮುಗಬೊಟ್ಟು ಇವೆಲ್ಲ ಕೇವಲ ಅಲಂಕಾರ ಅಷ್ಟೆ. ‘ಪುಟ್ಟ ಮುತ್ತೈದೆ’ ಎಂಬಲ್ಲಿ ಹತೋಟಿ ಭಾಷೆಯ ನಿಗೂಢತೆ ಇದೆ ಎಂದೆನಿಸುತ್ತದೆ. ಏನನ್ನೋ ಹೇಳಲು ಹವಣಿಸಿ ಹಿಂಜರಿದ ಸಂದೇಹ. ಪುಟಪುಟನೇ ನೆಗೆದಾಡುವ ಪುಟ್ಟ ಮುತ್ತೈದೆಯ ಸಂತೋಷ ನೋಡಿದರೆ ಆಗ ತಾನೆ ಎದ್ದು ನಿಂತು ನಡೆದಾಡಲು ಕಲಿತು ನೆಗೆದಾಡುವ ಕರುವಿನ ಸಂಭ್ರಮ. ಗಂಡು ಹೆಣ್ಣನ್ನು ಬೆಸೆದ ಯಾವುದೋ ದಿವ್ಯಸೂತ್ರ, ಅವರಿಬ್ಬರ ಬಾಳಿನ ಆಂತರ್ಯವನ್ನು ಸೂಕ್ಷ್ಮವಾಗಿ ಹೇಳುವ ಕವಿಯ ಜಾಗರೂಕ ವಿವೇಕ ಗೋಚರಿಸುತ್ತದೆ. ಅವಳ ದೇಹದಲ್ಲಿ ಜಾಗೃತವಾದ ಜೈವಿಕ ಕ್ರಿಯೆಯಿಂದ ಆಕೆ “ದೊಡ್ಡವಳಾಗಿ” ಈತ ಚಿಕ್ಕವನಿದ್ದು ಎನ್ನುವಲ್ಲಿ ಒಂದೊಂದು ಪದವೂ ಯಾವುದೋ ಅರ್ಥಕ್ಕಾಗಿ ದುಡಿಯುತ್ತಿದೆ. ಪಲ್ಲವಿ ಹಿಗ್ಗುತ್ತಾ ಚರಣ ಚಲಿಸಿದಂತೆ, ಅರ್ಥ ಸಾಧ್ಯತೆಯ ಎಲ್ಲ ಸಾಫಲ್ಯಕ್ಕೆ ಸೆರೆಯಾದ ಶಬ್ಧಜಾಲ ನಿಧಾನವಾಗಿ ಹರಡುತ್ತದೆ. “ಶೋಭನವ ಮಾಡಿದ್ದು ಊರಿಗಾಟ” ಈ ಸಾಲು ಓದುವಾಗ ಗೋಪಾಲಕೃಷ್ಣ ಅಡಿಗರ ಮಾತು ನೆನಪಾಗುತ್ತದೆ. 

ಆಶೆಯೆಂಬ ತಳವೊಡೆದ ದೋಣಿಯಲಿ 

ದೂರ ತೀರ ಯಾನ ಯಾರ ಲೀಲೆಗೆ 

ಯಾರೋ ಗುರಿಯಿರದೆ ಬಿಟ್ಟ ಬಾಣ’

ಊರಜನಕ್ಕೆ ‘ಪೆಚ್ಚುಮೊರೆಯ ಅಳಿಯ’ ‘ಶೋಭನ’ ‘ಪ್ರಸ್ತದೂಟ’ ಇವೆಲ್ಲ ಸಂತಸದ 

ಸಂಗತಿಗಳು ಇದಕ್ಕೆಲ್ಲ ‘ದೇವರ ಸಾಕ್ಷಿ’ ‘ದೇವರ ಸಾಕ್ಷಿ’ ಎಂಬುದೂ ಉದ್ದೇಶಪೂರ್ವಕವಾದದ್ದೇ. 

ವರ್ಷವೆಂಬುದರೊಳಗೆ ಚೊಚ್ಚಲದ ಸಂಭ್ರಮವು ! 

ದೈವದಾಟವು ಎಂದಿತಿಡಿಯ ಊರು (ಎಂದಿತು ಇಡೀ ಊರು) 

ಮಗನು ಬಂದಿರೆ ಇಹಕೆ ತಂದೆ ಏರಿದ ಪರಕ್ಕೆ 

ಕ್ಷೀರಸಾಗರವಾಯ್ತು ಉಪ್ಪು ನೀರು 

ತಂದೆ ಹಿಡಿದಿಹ ಹಾದಿ ಒಂದೆರಡು ದಿನದಲ್ಲಿ

ಕೂಸು ಹಿಡಿಯಿತು ತಾಯಿಗುಳಿದಿತೇನು ? 

ಮೈ-ಗೋರಿಯಲಿ ಮಡಗಿ ಜೀವ ಜೀವನವಾಯ್ತು

ಜೇನು ಹುಳ ಉಳಿದಂತೆ ಕಳೆದು ಜೇನು. 

ಚೊಚ್ಚಲ ಸಂಭ್ರಮದಲ್ಲಿ ಹರಿದ ತೊರೆ ಒಂದೇಕ್ಷಣದಲ್ಲಿ ಬತ್ತಿ ಹೋಯಿತು. ಗಂಡ ಹೊರಟ ಮರುಕ್ಷಣ ಬಡಿದ ವೈಧವ್ಯದ ಹೊಡೆತ ವಾಸಿಯಾಗುವ ಮುನ್ನವೇ ಪುತ್ರಶೋಕ ಬರಬೇಕೆ ? ಅಂತ್ಯವಾಗದ ಅನಂತ ಸಂಕಟ ಅವಳನ್ನೇ ಹುಡುಕಿ ಬರಬೇಕೆ ಸಾವಿಗೀಡಾದವನ ಸಂಗಾತಿಯಾದ ದೌರ್ಭಾಗ್ಯಕ್ಕೆ ಅವನ ದೌರ್ಭಾಗ್ಯದ ಪಾಲು ಅವಳಿಗೂ ಬರಬೇಕಾದದ್ದು ವಿಧಿ ನಿಯಮವೇ ?ಸುಖ ಕೊಟ್ಟ ಸಖನನ್ನು, ಹಾಲುಕಂದನ ನಗುವನ್ನು ಉಸಿರು ನಿಲ್ಲುವವರೆಗೆ ಮರೆಯಬೇಕೆ ? ಬದುಕಿರುವವರೆಗೆ ನಿರ್ಜೀವಿಯಾಗಿರಬೇಕೆ ? ಎದೆಯಲ್ಲಿ ಗೋರಿಮೌನ, ಬದುಕೆಲ್ಲ ಭಣಗುಟ್ಟುವ ಶೂನ್ಯ ‘ಕ್ಷೀರ ಸಾಗರವಾಯ್ತು’ ಉಪ್ಪು ನೀರು “ಜೇನುಹುಳು ಉಳಿದಂತೆ ಕಳೆದು ಜೇನು” ವಿಧಿ ತಾನು ಗೆದ್ದು ಬಿಟ್ಟು ಹೋದ ಅವಶೇಷಕ್ಕೆ ಇದಕ್ಕಿಂತ ಭಗ್ನ ಚಿತ್ರ ಬೇಕೆ ? 

ಚಿರಕಾಲ ವ್ಯಸನಕ್ಕೆ ತಳ್ಳಿದ ದುಃಖಕ್ಕೆ, ಕಟ್ಟುಗ್ರ ಶೋಕದ ಭಾರಕ್ಕೆ ಪುಟ್ಟ ಹುಡುಗಿ ಮಾಡಿದ ಪಾಪವೇನು ? ಅವಳ ಸತ್ಪಾತ್ರ ಬದುಕಿಗೆ ಅಕಾಲ ಮೃತ್ಯು ಬಂದು ವಿಪರೀತ ವಿನಾಶ ಮಾಡಿತಲ್ಲಾ ಏಕೆ ? 

ಸತ್ತೆನೆಂದಳು ಕೂಸು-ತಾಯಿ ಅಯ್ಯೋ ಎಂದು 

ಭೋರೆಂದು ಗೋಳಿಟ್ಟು ಹೊಟ್ಟೆ ಹೊಸೆದು 

ಹುಚ್ಚೆದ್ದು ಹೌಹಾರಿ ಹುಯ್ಯಲಿಟ್ಟಳು ಆಕೆ 

ತನ್ನ ತಾ ಶಪಿಸಿದಳು ಹಲ್ಲು ಮಸೆದು 

ಹತ್ತು ದಿವಸಕ್ಕೆ ಹಾಳು ಮುತ್ತೈದೆತನ ಹೋಗಿ 

ವೈಧವ್ಯ ಸಂಪತ್ತು ಪಡೆದಳಾಕೆ 

ಮನೆಯವರು ವೈದಿಕರು ಊರುಧರ್ಮದ ತವರು 

ಶಾಸ್ತ್ರವಿದೆ ಬೇರೆ ವಿಚಾರವೇಕೆ ? 

ಕರ್ಮಠ ಬ್ರಾಹ್ಮಣಕ್ಕೆ ವೈಧವ್ಯ ಸಂಪತ್ತಿನ ಜೊತೆ, ದುಃಖವನ್ನು ದುಃಖ ತಬ್ಬಿಕೊಂಡಂತೆ, ಹುಚ್ಚೆದ್ದು ಹೌಹಾರಿ ಹುಯಲಿಟ್ಟು ತನ್ನನ್ನು ತಾನು ಶಪಿಸಿಕೊಂಡರೂ, ಕತ್ತರಿಸಿ ಹೋದ ಕರುಳು ಮತ್ತೆ ಬರುವುದೇ ? ಗೋರಿ ಸೇರಿದವನು ಮರಳಿಯಾನೇ ? ತಾನೇ ಹೆತ್ತವವನ್ನು ತಾನು ಮತ್ತೆ ಚುಂಬಿಸಬಲ್ಲೆನೇ ? ಪುಟ್ಟ ಹುಡುಗಿ ಬದುಕಿಯೂ ಶವವಾದಳು. ಪ್ರಪಂಚದ ಸುಖವನ್ನು ಹಿಸುಕಿ ಹೊಸಕುವ ಸಾವಿಗೆ, ಜೀವಕೋಟಿಯನ್ನು ಹಿಂಡಿ ಹಿಗ್ಗುವ ಸಾವಿಗೆ ಕರುಣೆಯುಂಚೆ ? ಕತ್ತಲೆಯಲ್ಲಿ ಕಣ್ಮರೆಯಾದಂತೆ, ಅರಳಿ ಬಾಳಬೇಕಾದ ಹೂ ನರಳಿ ಹೋಯಿತಲ್ಲ ? ವಿವಾಹ ಹೋಮದ ಅಗ್ನಿ, ಬದುಕಿನ ದುಃಖ ಸುಡದೇ ಬದುಕನ್ನೇ ಸುಟ್ಟು ಹಾಕಿತು ! ತನ್ನ ಉದರದಲ್ಲಿ ಮೂಡಿದ ಒಂದೇ ಮೊಗ್ಗು ಕಳಚಿಬಿದ್ದು ಮಣ್ಣಾಯಿತು ! ನಿರ್ದಯವಾದ ವಿಧಿ ಸಂಚಿಗೆ ಸಿಕ್ಕ ದೌರ್ಭಾಗ್ಯೆ ! ಮುನಿಸಿಕೊಂಡ ವಿಧಿಗೆ ಮಣಿದು ಮುದುಡಿ ಹೋದ ಹತ ಭಾಗ್ಯೆ. ಅವಳಿಗೆ ಲಭ್ಯವಾದ ವೈಧವ್ಯ ಸಂಪತ್ತು ! ಎಂಥ ವಿಪರ್ಯಾಸ ಸಂಸಾರ ಸಂಪತ್ತು ಪಡೆಯುವಲ್ಲಿ ‘ವೈಧವ್ಯ ಸಂಪತ್ತು’ “ಊರು ಧರ್ಮದ ತವರು” ಯಾವ ಧರ್ಮ ? ಯಾವ ಶಾಸ್ತ್ರ ? ಅದೇ ನಿಷ್ಕರುಣಿ ನಿಯಮ. ಪರದ ಸುಖಕ್ಕೆ ಇಹವ ಕೊಲ್ಲುವ ದಾರಿ. ಊರು ತೋರಿದ ನಿರಾಳ ದಾರಿ. ವ್ಯಂಜನವಿರದ ಸೌಭಾಗ್ಯ, ತಲೆಬೋಳು, ಅಂಗಾರ, ಕೆಂಪುಸೀರೆ ಸರಳುಗಳ ಹಿಂದಿನ ಸಿಂಗಾರ. 

ತಲೆಭಾರ ಇಳಿದಿತ್ತು ಅಂಗಾರ ಬೆಳೆದಿತ್ತು

ಮೈಯನ್ನು ಮುಚ್ಚಿತ್ತು ಕೆಂಪು ಸೀರೆ 

ಆದರಯ್ಯೋ ಪಾಪ ! ಆಕೆಯಿನ್ನೂ ಮಗುವು 

ಸಿಂಗಾರವಿರದೆ? ಆ ಮಾತೇ ಬೇರೆ 

ಹಿಟ್ಟು ಅವಲಕ್ಕಿಗಳ ಮೂಲಕ್ಕೆ ಹುಟ್ಟಿದಳೆ ? 

ಹೂ ಬತ್ತಿ ಹೊಸೆಯಲಿಕೆ ಮೈ ತಳೆದಳೆ ? 

ಎಂಬಂತೆ ಬಾಳ ಕಳೆದಳು ಬಾಲೆ ಹೂಮಾಲೆ ! 

ಮುಳ್ಳು ಕಂಟೆಯ ಮೇಲೆ ತಾನೆಳೆದಳೊ ! 

ಹೂಮಾಲೆಯಂಥ ಬಾಲೆಯ ಬದುಕು ಮುಳ್ಳ ಮೇಲೆ ಬಿದ್ದಂತಾಯಿತು.

ಮುಂದಿನ ಬದುಕೆಲ್ಲ ದೈವ ಕಾಯಕದಲ್ಲಿದ್ದು, ಸಪ್ಪೆ ಊಟ ತಿಂದು ಬಲವಂತವಾಗಿ ಶುಷ್ಕವಾಗಿಸಿಕೊಳ್ಳುವ ಧ್ಯಾನ, ಇಡೀ ಜೀವನ ಪರಾಧೀನ, ಸರ್ವಶಕ್ತ ಸಂಪ್ರದಾಯಕ್ಕೆ ಶರಣು. ದೇವರ ಹೂ ಬತ್ತಿ ಹೊಸೆದು ಅವಲಕ್ಕಿ ಪ್ರಸಾದಕ್ಕೆ ಕೈಚಾಚಿ ತೃಪ್ತವಾಗಿ ತಣಿಯಬೇಕು. ಭಾವಕೋಶದಲ್ಲಿ ಅಗಾಧ ನೀರವವನ್ನು ಅನುಭವಿಸುತ್ತಾ ವೈಧವ್ಯವನ್ನು ಹದಗೊಳಿಸಬೇಕು. ಧರ್ಮ ಅರ್ಥ ಕಾಮ ಮೋಕ್ಷಗಳ ಸಂಕಲ್ಪ ಬಲದಲ್ಲಿ ಸಾಕಾರವಾಗಬೇಕು. ಸನಾತನ ಸಂಸ್ಕೃತಿಯನ್ನೇ ಆಧಾರವಾಗಿಸಿಕೊಳ್ಳಬೇಕು. ಯಾರ 

ನಿಯಮಕ್ಕೆ ಯಾರ ಸಂತೋಷಕ್ಕೆ ಮಾಡಿಟ್ಟ ನಿಯಮವೋ ? ಸಿಡಿಮದ್ದಿಗೆ ಸಿಕ್ಕು ಸುಟ್ಟುಕೊಂಡು ಸಾಯುವವಳ ಮುಂದೆ ದೀಪಾವಳಿಯವರ ಕೇಕೆ ? 

ನಿಟ್ಟುಸಿರ ಸರದಲ್ಲಿ ಕಂಬನಿಯ ಪೋಣಿಸುವ 

ಪುಟ್ಟ ವಿಧವೆಯು ಪುರಾಣಕ್ಕೆ ಬರಲು 

ಗುಡಿಯ ಮೂರ್ತಿಗೆ ಮಂಕು ಹಿಡಿದು ಆಚಾರ್ಯರಿಗೂ 

ಉರುಲಿಕ್ಕಿದಂತೆ ಬಿಗಿದಿತ್ತು ಕೊರಲು 

ಕುರುಡು ಧರ್ಮಕ್ಕೆ ಸ್ಮಾರಕವು ನಿಂತಂತಾಕೆ 

ಮೈ ಮರೆತು ನಿಂತಾಗ್ಗೆ ಗೂಗೆ ಹಾಡಿತ್ತು 

ಮುದ್ರೆಯೊತ್ತುವ ಕಣ್ಣು ಮೋರೆ ನೋಡಿತ್ತೊಮ್ಮೆ

ಜಾರಕೃಷ್ಣನ ಕತೆಗೆ ಕೊಡು ಮೂಡಿತ್ತು !

ಆ ನಿರ್ಜೀವ ನಂಬಿಕೆಗೆ ಅದೆಷ್ಟು ಜೀವಗಳು ಬಲಿಯಾದವೋ ? ಬ್ರಾಹ್ಮಣದ ಹುಚ್ಚು ಉತ್ಸವಕ್ಕೆ ಅದೆಷ್ಟು ಸುಂದರ ಸಂಸಾರಗಳು ಸುಟ್ಟು ಹೋದವೋ ? ಶ್ರೇಷ್ಠತೆಯ ಮದದ ಉನ್ಮಾದಕ್ಕೆ ಇಂಥ ಸಣ್ಣ ವಯಸ್ಸಿನ ಹುಡುಗಿಯರೆಲ್ಲ ಸ್ಮಾರಕವಾದವರೆಷ್ಟೋ?

ದೈವಸಾನಿಧ್ಯದಲ್ಲಿ ಕೃಷ್ಣಕಥೆಯ ಪಾರಾಯಣ. ಅವನ ವಿಲೋಲ ಮಾಧುರ್ಯ, ರಾಸಲೀಲೆಯ ರಸಿಕತೆ, ವಸ್ತ್ರಾಪಹರಣದ ಥಳಥಳ, ಗೋಪಿಕೆಯರ ಮೆರುಗು, ಕೊಳಲ ನಾದದ ರೋಮಾಂಚನ, ಸ್ಪರ್ಷಕ್ಕೆ ಯಾಚನೆ, ಸಾನಿಧ್ಯ ಸೌಭಾಗ್ಯ, ಸಾವಿರ ಲಾವಣ್ಯವತಿಯರ ನಡುವೆಯೂ ರಾಧೆಯ ಹಂಬಲ, ಜಗವ ನಗುವ ನಗಿಸುವ, ಕುಣಿದ ಕುಣಿಸಿದ ಮೋಹನವಿಲಾಸ, ಸುಂದರಿಯವರ ನಡುವೆಒಮ್ಮೆ ಕಂಡು ಕಾಣದೇ ಕಾಡಿ ಅವರಲ್ಲಿ ವಿರಹ ಸೃಷ್ಟಿಸಿ ಮರುಕ್ಷಣ ಓಡಿಬಂದು ತೃಷೆ ತೀರಿಸಿದ ರಸಮಯ ಶೃಂಗಾರ, ಈ 

ಕಥೆ ಕೇಳಿದ ವೈಧವ್ಯ ಮನಸ್ಸು, ಮೈ ವ್ಯಾಪಿಸದೇ ಅದನ್ನು ಹಿಡಿಯಬೇಕು. ಬಹಿರಂಗದ ವಾಂಛಲ್ಯಗಳಿಗೆ ಅಂತರಂಗದ ಬಾಗಿಲು ಭದ್ರವಾಗಬೇಕು. ವೈಧವ್ಯದ ತಪೋಭಂಗವಾಗದಂತೆ ಕಾಪಾಡಿಕೊಳ್ಳಬೇಕು. 

ಈ ಪುಟ್ಟ ವಿಧವೆಯ ಅವಸ್ಥಾಂತರಗಳಲ್ಲಿ ಸಂಕಟವಿದೆ ದೈನ್ಯತೆಯಿದೆ ಕೊರಗಿದೆ. ಆದರೆ 

ವಿಧವೆಯಲ್ಲಿ ಎಲ್ಲಿಯೂ ಹೊಸರೂಪ ಪಡೆಯುವ ಹವಣಿಕೆಯಿಲ್ಲ. ಸಂಪ್ರದಾಯದ ಗೆರೆ ದಾಟುವುದಿಲ್ಲ. ಹಳೆಯ ಜೀವನ ಪದ್ಧತಿ ಚಲಿಸುವುದಿಲ್ಲ. ಇಲ್ಲಿ ಕವಿ, ಮರುಗುವ ಜೀವವನ್ನಷ್ಟೇ ಗ್ರಹಿಸಿ ಅದರ ಜೀವಶಕ್ತಿಯನ್ನು ಉದ್ದೇಶ ಪೂರ್ವಕವಾಗಿಯೇ ಮರೆಯುತ್ತಾರೆ ಎಂದೆನಿಸುತ್ತದೆ. ಬೆಳಕಿಲ್ಲದ ಇಕ್ಕಟ್ಟಿನಲ್ಲಿ ಪುಟ್ಟ ವಿಧವೆಯನ್ನು ಕಳುಹಿಸುತ್ತಾರೆ. ಹಾಗೆಲ್ಲ ಮಾಡುವಾಗ ಬೇಂದ್ರೆಯವರ ಸಂವೇದನೆ ಕ್ರಾಂತಿಯಲ್ಲ. ಬದುಕು ಬಂದಂತೆ ವಿನಯದಿಂದಲೇ ಒಪ್ಪಿಕೊಳ್ಳಬೇಕೆಂಬುದೇ ಆಗಿದೆ. ಪುಟ್ಟ ವಿಧವೆಯನ್ನು ಹೊಸ 

ವಿಪ್ಲವಕ್ಕೆ ಸಿಕ್ಕಿಸಿ ಆಕೆಯನ್ನು ಮತ್ತಷ್ಟು ನೋಯಿಸಬಾರದೆಂಬ ಅಂತಃಕರಣವೇ ಇರಬೇಕು. ನಿಸ್ಸಹಾಯಕ ಮನುಷ್ಯ ದೇವರಿಗೇ ಮೊರೆ ಹೋಗಬೇಕೆನ್ನುವ ಥಿಯರಿಯನ್ನು ಸೂಚಿಸುತ್ತಾರೆ. ಆದರೆ ಇದು ಸಿದ್ಧಾಂತವಲ್ಲ, ಸಾಂತ್ವನಕ್ಕೆ ಅವರೇ ಹುಡುಕಿಕೊಂಡ ಉಪಾಯ. 

ಬದುಕಿನ ಒಳಕೋಣೆಗಳಲ್ಲಿ ಬಿಕ್ಕುವ ದನಿಗಳನ್ನು ಕೇಳಿದರೂ ಯಾತನೆಯನ್ನು ಕಂಡರೂ ಕವಿ ದುಃಖಿಸುತ್ತಾರೇ ವಿನಹ ತಮ್ಮ ಪಾತ್ರಗಳಿಗೆ ಸಿಟ್ಟು ಬರಿಸಿ ವ್ಯವಸ್ಥೆಯನ್ನು ಪ್ರತಿಭಟಿಸುವಂತೆ ಮಾಡಲು ಪ್ರಯತ್ನಿಸುವುದಿಲ್ಲ. ಹಾಗೆಂದು ಕವಿ ದುರ್ಬಲರೆಂದೇನೂ ಅಲ್ಲ. ಅವಸ್ಥೆಯನ್ನಷ್ಟೇ ಹೇಳಿ ನೈತಿಕ ಪ್ರಜ್ಞೆಯನ್ನು ಓದುಗರಿಗೇ ಬಿಡುತ್ತಾರೆ ಅಷ್ಟೇ. ಬಹುಶಃ ಕಾವ್ಯದ ಆರೋಗ್ಯ ಇದೇ ಇರಬೇಕು ಎಂದೆನಿಸುತ್ತದೆ.



ಶ್ರೀ ಕೆ ವಿ ವೆಂಕಟೇಶಮೂರ್ತಿ 

ಎಂ.ಎ ಇಂಗ್ಲಿಷ್ ಉಪನ್ಯಾಸಕರು, ಚಳ್ಳಕೆರೆ

ಕಾಮೆಂಟ್‌ಗಳು