ಜೀವವಿಕಾಸ ಮತ್ತು ದಶಾವತಾರ
ಜೀವವಿಕಾಸ ಮತ್ತು ದಶಾವತಾರ
1858 ನೇ ವರ್ಷ ಇಂಗ್ಲೇಂಡಿನ ಒಬ್ಬ ಜೀವಶಾಸ್ತ್ರಜ್ಞನ ಒಂದು ಸಿದ್ಧಾಂತವು ಇಂಗ್ಲೇಂಡಿನ ಜನಗಳ ಅಷ್ಟೇ ಏಕೆ ಇಡೀ ಜಗತ್ತಿನ ಸಿದ್ಧಾಂತ, ನಂಬುಗೆಗಳನ್ನೆಲ್ಲಾ ತಲೆ ಕೆಳಗೆ ಮಾಡಿತು. ಜಗತ್ತಿನ ಮೇಲೆ ಜೀವಿಗಳು ಉದಿಸಿದ್ದು ಹೇಗೆ? ನಂತರ ಕಾಲಾನುಕ್ರಮದಲ್ಲಿ ಅವು ಹೇಗೆ ರೂಪು ಬದಲಿಸಿಕೊಂಡು ಬದಲಾಗುತ್ತಾ ಇಂದಿನ ಸ್ಥಿತಿಗೆ ಬಂದು ತಲುಪಿದವು? ಎಂಬುದು ಆ ಸಿದ್ಧಾಂತದ ತಿರುಳಾಗಿತ್ತು. ಅದುವೇ ‘ಜೀವ ವಿಕಾಸವಾದ’. ಅದನ್ನು ಪ್ರತಿಪಾದಿಸಿದವನು ಇಂಗ್ಲೇಂಡಿನ ಪ್ರಸಿದ್ದ ಜೀವಶಾಸ್ತ್ರಜ್ಞ ‘ಚಾರ್ಲ್ಸ್ ಡಾರ್ವಿನ್’. ನಮಗೆಲ್ಲಾ ವಿಕಾಸವಾದದ ಪಾಠ ಮೊದಲಾಗುವುದೇ ಡಾರ್ವಿನ್ನನ ಆನ್ ದಿ ಆರಿಜಿನ್ ಆಫ್ ಸ್ಪೀಷಿಸ್ ಕೃತಿಯ ಮೂಲಕ.
ಹರ್ ಮ್ಯಾಜೆಸ್ಟೀಸ್ ಸರ್ವಿಸ್ ಬೀಗಲ್ ಹಡಗಿನಲ್ಲಿ ಇಡೀ ಪ್ರಪಂಚ ಸುತ್ತುವ ಮೂಲಕ ಜಗತ್ತಿನ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಜೀವ ವೈವಿಧ್ಯವನ್ನು ಕಂಡ ಡಾರ್ವಿನ್ ಅಚ್ಚರಿಗೊಂಡಿದ್ದನು. ಇದುವರೆಗೆ ಯಾವ ಗ್ರಂಥಗಳಲ್ಲೂ ಉಲ್ಲೇಖಿಸದ ಅನೇಕ ಜೀವಿಗಳು ಭೂಮಿಯ ಮೇಲೆ ವಾಸಿಸುತ್ತಿವೆಯೆಂದು, ಸೃಷ್ಟಿಯ ಅಗಾಧತೆ ಮಾನವನ ಆಲೋಚನೆಗೂ ಮೀರಿದ್ದೆಂದು ಅವನಿಗೆ ಅರಿವಾದಾಗ ಅದರ ಆಳವನ್ನು ಇನ್ನೂ ನೋಡುವ ಆಸೆ ಅವನಲ್ಲಿ ಚಿಗುರಿತ್ತು.
ಇದೆಲ್ಲದರ ಮಧ್ಯೆ ಅವನಿಗೆ ಇನ್ನೊಂದು ಪ್ರಶ್ನೆ ಕಾಡುತ್ತಿತು. ಅವನು ಕಾಲಿರಿಸಿದ ಪ್ರತಿ ಪ್ರದೇಶದಲ್ಲಿ ಅವನು ನೊಡಿದ ಜೀವಿಗಳು ನೋಡಲು ಅಷ್ಟೇನೂ ಅಪರಿಚಿತವೆನಿಸಿರಲಿಲ್ಲ, ತಾನಿದ್ದ ಪ್ರದೇಶದಲ್ಲಿಯ ಜೀವಿಗಳಿಗೂ ಇಲ್ಲಿ ಅವನು ನೋಡುತ್ತಿದ್ದ ಜೀವಿಗಳಿಗೂ ಏಕಕಾಲದಲ್ಲಿ ಅನೇಕ ಸಾಮ್ಯತೆಗಳು ಮತ್ತು ಅನೇಕ ವೈರುಧ್ಯಗಳಿದ್ದವು. ಹೇಗೆ ಇದೆಲ್ಲಾ ಸಾಧ್ಯ? ಈ ಪ್ರಶ್ನೆ ಅನೇಕ ದಿನಗಳ ಕಾಲ ಅವನ ತಲೆಯನ್ನು ಹೈರಾಣಾಗಿಸಿತ್ತು.
ಕೊನೆಗೆ ಡಾರ್ವಿನ್ನನು ತನ್ನ ಜೀವ ವಿಕಾಸ ಸಿದ್ಧಾಂತದ ಮೂಲಕ “ಈ ಭೂಮಿಯ ಮೇಲೆ ಜನಿಸಿದ ಯಾವುದೇ ಜೀವಿಯು ಇಂದು ಇರುವಂತೆ ಹಿಂದೆ ಇರಲಿಲ್ಲ ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ ಒಬ್ಬ ಪೂರ್ವಜನಿಂದ ಮುಂದೆ ಅನೇಕ ಕವಲುಗಳು ಹುಟ್ಟಿಕೊಂಡು ಭಿನ್ನ ಜಾತಿಗಳ ಜೀವ ಪ್ರಭೇದ ಸೃಷ್ಟಿಯಾಯಿತು. ಈ ಜೀವ ಪ್ರಭೇದಗಳು ಮುಂದೆ ಅನೇಕ ಕಾರಣಾಂತರಗಳಿಂದ ತಾವು ವಾಸಿಸುತ್ತಿದ್ದ ಪ್ರದೇಶಗಳ ಪ್ರಭಾವಕ್ಕೆ ಒಳಗಾಗಿ ವಿಕಾಸವಾಗುತ್ತಾ ಬಂದವೆಂದು” ಪ್ರತಿಪಾದಿಸಿದನು.
ಮಾನವನು ಸಹ ಈ ವಿಕಾಸದ ಹಾದಿಯಲ್ಲಿಯೇ ಸಾಗಿ ಬಂದಿರಬೇಕೆಂದು ಚಿಂತಿಸಿದ ಡಾರ್ವಿನ್ ಮಾನವನ ಮತ್ತು ಅವನ ಪೂರ್ವಜರ ಕುರಿತು ಹೀಗೆ ಹೇಳುತ್ತಾನೆ. “ಕೋತಿಗಳು ಮಾನವನ ಪೂರ್ವಜರಲ್ಲ ಬದಲಾಗಿ ಮರದಿಂದ ಕೆಳಗೆ ಇಳಿದ ಮೊದಲ ಸಾಮಾನ್ಯ ವಾನರನೊಬ್ಬ ಮನುಷ್ಯನ ಪೂರ್ವಜನಾಗಿದ್ದ”. ಮಂಗವೊಂದು ಮರದಿಂದ ಕೆಳಗೆ ಇಳಿದು ವಾನರನಾಗುವ ಪ್ರಯತ್ನವೇಕೆ ಮಾಡಿತೋ ಕಾಣೆವು. ತಾನು ವಾಸಸಿಸುತ್ತಿದ್ದ ಪ್ರದೇಶದಲ್ಲಿನ ಪ್ರತಿಕೂಲ ವಾತಾವರಣಗಳನ್ನು ಎದುರಿಸಲು ಇರಬಹುದು ಅಥವಾ ಇನ್ನಾವುದೇ ಕಾರಣ ಇರಬಹುದು. ಅದಕ್ಕೆ ಖಚಿತ ಉತ್ತರ ಇತಿಹಾಸದ ಕಾಲಗರ್ಭದಲ್ಲಿ ಹುದುಗಿ ಹೋಗಿದೆ. ಆದರೆ ಆ ಮಂಗನ ಚಿಕ್ಕ ತಲೆಗೆ ಹೊಳೆದ ಆ ಆಲೋಚನೆ ಮುಂದೆ ಮಹಾ ನಾಗರಿಕೆತಗಳ ಉಗಮಕ್ಕೆ, ವಿಜ್ಞಾನ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಕಾರಣವಾಯಿತೆಂಬುದು ಮಾತ್ರ ಸತ್ಯ.
ಮುಂದೆ ಅನೇಕ ಜೀವಶಾಸ್ತ್ರಜ್ಞರು ಮತ್ತು ಮಾನವಶಾಸ್ತ್ರಜ್ಞರು ಮಾನವನು ಹೇಗೆ ಕಾಲಾನುಕ್ರಮದಲ್ಲಿ ವಿಕಾಸವಾಗುತ್ತಾ ಬಂದ ಎಂಬುದನ್ನು ಭೂಮಿಯ ಮೇಲೆ ದೊರೆತ ಪ್ರಾಚೀನ ಆದಿಮಾನವನ ಅನೇಕ ಪಳೆಯುಳಿಕೆಗಳ ಆಧಾರದಿಂದ ಡಾರ್ವಿನ್ನನ ಸಿದ್ಧಾಂತಕ್ಕೆ ತಮ್ಮ ವಾದಗಳನ್ನು ಸೇರಿಸಿ ಒಂದು ಗಟ್ಟಿಗೋಡೆಯನ್ನೇ ಕಟ್ಟಿದರು
ಇದಿಷ್ಟು ಡಾರ್ವಿನ್ನನ ಕತೆಯಾಯಿತು. ಆದರೆ ಇಲ್ಲಿ ದಶಾವತರದ ಕತೆಗಳು ಯಾಕೆ ಬಂದುವು? ಜೀವವಿಕಾಸಕ್ಕೂ ದಶಾವತಾರಗಳಿಗೂ ಎಲ್ಲಿಯ ಸಂಬಂಧ? ಎಂದು ಅನಿಸಬಹುದು. ಅದನ್ನೆ ಈಗ ಹೇಳ ಹೊರಟಿದ್ದೇನೆ. ಈ ಮುಂದೆ ನಾನು ಹೇಳ ಹೊರಟಿರುವ ವಿಷಯಗಳೆಲ್ಲಾ ಸಾರಾಸಗಟಾಗಿ ಸತ್ಯವೆಂದು ನಾನು ವಾದಿಸ ಹೊರಟಿಲ್ಲ. ಬದಲಾಗಿ ಈ ಕತೆಗಳ ಹಿಂದಿನ ಮರ್ಮ ಹೀಗೆ ಇದ್ದಿರುವ ಸಾಧ್ಯತೆಯೂ ಇದೆ ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ ಎಂಬುದನ್ನು ಮಾತ್ರ ಓದುಗರು ಗಮನದಲ್ಲಿಟ್ಟುಕೊಳ್ಳಬೇಕು.
ದಶಾವತಾರದಲ್ಲಿ ಕ್ರಮವಾಗಿ ಮತ್ಸ್ಯ, ಕೂರ್ಮ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕೊನೆಯದಾಗಿ ಕಲ್ಕಿ ಅವತಾರಗಳು ಕಂಡುಬರುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿ ಅವತಾರವೂ ಅದರ ಹಿಂದಿನ ಅವತಾರದ ಮುಂದಿನ ಭಾಗವಾಗಿ, ಹಿಂದಿನ ಅವತಾರಕ್ಕೆ ಪೂರಕವಾಗಿ ಕಂಡು ಬರುತ್ತದೆ.
ದಶಾವತಾರಗಳಲ್ಲಿ ಮತ್ಸ್ಯ ಅವತಾರವು ಮೊದಲನೆಯದು. ಮತ್ಸ್ಯ ಎಂದರೆ ಮೀನು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಜೀವ ವಿಕಾಸದ ಪ್ರಾರಂಭದಲ್ಲಿ ಇದ್ದ ಅಮೀಬಾ, ಪ್ರೋಟೊಜುವಾ, ಪ್ಯಾರಾಮೀಸಿಯಂಗಳಂತಹ ಏಕಕೋಶ ಜೀವಿಗಳು ಕ್ರಮೇಣ ಬಹುಕೋಶೀಯ ಜೀವಿಗಳಾಗಿ ಬದಲಾಗುತ್ತಾ ಕೊನೆಗೆ ಸು. 530 ಮಿಲಿಯನ್ ವರ್ಷಗಳ ಹಿಂದೆ ಮೀನಿನ ಸಂತತಿಯ ಪೂರ್ವಜರಾದ ಕೊನೊಡೋಂಟ್ಸ್ ಮತ್ತು ಓಸ್ಟ್ರ್ಯಾಕೊಡೆರ್ಮ್ಸ್ ಗಳಾಗಿ ರೂಪು ತಳೆದಿದ್ದವು. ಬಹುಶಃ ಬೆಳಕು ಹೀರುವ ಪ್ರೋಟಿನ್ ಗಳು ಒಂದೆಡೆ ಸೇರಿ ಕಣ್ಣುಗಳಾಗಿ ರೂಪುಗೊಂಡ ಮೊದಲ ಪ್ರಾಣಿ ಪ್ರಭೇದಗಳು ಮೀನುಗಳೇ ಇರಬಹುದು. ಇವು ಕೇವಲ ನೀರಿನಲ್ಲೇ ವಾಸಮಾಡುತ್ತಿದ್ದ ಜೀವಿಗಳಾಗಿದ್ದವು. ಭೂಮಿಯ ಮೇಲೆ ಸಾಗರದಲ್ಲಿ ಉದಿಸಿದ ಈ ಜೀವಿಯ ಸಂಕೇತವಾಗಿ ಮತ್ಸ್ಯಾವತಾರವನ್ನು ಚಿತ್ರಿತವಾಗಿದೆ.
ಮೀನಿನ ನಂತರ ವಿಕಾಸಗೊಂಡ ಜೀವಿಗಳೇ ಕೈಕಾಲುಗಳನ್ನು ಹೊಂದಿದ್ದ ಉಭಯವಾಸಿಗಳು. ನೀರಿನ ಮೇಲೆ ಮತ್ತು ಭೂಮಿಯ ಮೇಲೆ ಬದುಕಬಲ್ಲ ಸಾಮರ್ಥ್ಯ ಹೊಂದಿದ್ದ ಈ ಜೀವಿಗಳು ಪ್ರಕೃತಿಯಲ್ಲಿ ಬದುಕುವ ಸಾಮರ್ಥ್ಯವನ್ನು ಜಲಚರಗಳಿಗಿಂತಲು ಹೆಚ್ಚಿನದಾಗಿ ಗಳಿಸಿಕೊಂಡಿದ್ದವು. ಸು. 360 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿದ್ದವೆನ್ನಲಾದ ಇಚ್ತಿಯೋಸ್ಟಿಗಾ ಮತ್ತು ಎಲ್ಗಿನೆರ್ಪಿಟಾನ್ ಗಳು ಉಭಯಚರಗಳಲ್ಲಿ ಅತಿ ಪ್ರಾಚೀನವಾದವು ಎನ್ನಲಾಗಿದೆ. ಕೂರ್ಮವು (ಆಮೆ) ಸಹ ಉಭಯವಾಸಿಯೇ, ಇಲ್ಲಿ ಕೂರ್ಮಾವತಾರವು ಉಭಯವಾಸಿಗಳಾದ ಆಮೆ, ಮೊಸಳೆ, ಕಪ್ಪೆ ಇತ್ಯಾದಿಗಳ ಪ್ರತಿನಿಧಿಯಾಗಿ ಮೂಡಿದೆ.
ಮೂರನೆಯ ಅವತಾರವೆನಿಸಿದ ನರಸಿಂಹಾವತಾರವು ಉಭಯಚರಗಳನ್ನು ಮೀರಿ ಬೆಳೆದ ಅರ್ಧ ಮಾನವ ಮತ್ತು ಅರ್ಧ ಪ್ರಾಣಿಯ ಪ್ರತಿರೂಪವಾಗಿ ಕಾಣುತ್ತವೆ. ಆದಿಮ ಜೀವಿಗಳಿಂದ ಜಲಚರಗಳಾದ ಮೀನುಗಳು ಉದಿಸಿದವು, ನಂತರ ಉಭಯವಾಸಿಗಳಾದ ಆಮೆ, ಮೊಸಳೆಗಳು ಕಂಡುಬಂದವು. ಇವುಗಳ ನಂತರ ಕಾಣಿಸಿಕೊಂಡ ಜೀವಿಗಳೇ ಪೂರ್ಣವಾಗಿ ಭೂಮಿಯ ಮೇಲೆ ವಾಸ ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದ ನೆಲವಾಸಿಗಳು. ಸು. 245 ಮಿಲಿಯನ್ ವರ್ಷಗಳ ಹಿಂದೆ ಕಾಣಿಸಿಕೊಂಡು ಮಾನವ ಪೂರ್ವ ಯುಗದಲ್ಲಿ ಜೀವಿಸಿದ್ದ ದೈತ್ಯ ರಾಕ್ಷಸ ಜೀವಿಗಳಾದ ಟೈರನೋಸಾರ್, ಸ್ಪೈನೋಸಾರಸ್, ವೆಲಾಸಿರಾಪ್ಟೋರ್, ಡಿಲೊಫೊಸಾರಸ್ ನಂತಹ ಮುಂತಾದ ಡೈನೋಸಾರ್‍ಗಳು ಪೂರ್ಣ ಪ್ರಮಾಣದ ನೆಲವಾಸಿಗಳಾಗಿ ಇಡೀ ಭೂಮಿಯನ್ನೇ ಆಕ್ರಮಿಸಿದ್ದವು, ಅಚ್ಚರಿಯ ವಿಷಯವೆಂದರೆ ಈ ಜೀವಿಗಳು ಸಹ ನರಸಿಂಹಾವತಾರದಂತೆಯೇ ರಾಕ್ಷಸ ಗುಣದವು ಮತ್ತು ದ್ವಿಪಾದಿಗಳೇ ಆಗಿದ್ದವು. ಈ ಅವತಾರವು ಕೇವಲ ದ್ವಿಪಾದಿಗಳಿಗೆ ಅಥವಾ ಮಾಂಸಾಹಾರಿ ರಾಕ್ಷಸಿ ಜೀವಿಗಳಿಗೆ ಪ್ರತಿನಿಧಿಯೆಂದಲ್ಲ ಬದಲಾಗಿ ಅವುಗಳ ನಂತರ ಕಾಣಿಸಿಕೊಂಡ ಸೇಬರ್ ಟೂತ್ ಟೈಗರ್, ಮ್ಯಾಮತ್ ಮುಂತಾದ ಅನೇಕ ಭಯಾನಕ ಚತುಷ್ಪಾದಿಗಳಿಗೂ ಸಂಖೇತವಾಗಿದೆ ಎಂದುಕೊಳ್ಳಬಹುದು. ಮಾನವನಿಗೆ ಪೂರ್ವಜರಾಗಿದ್ದ ಅರ್ಧ ಮಾನವ ಮತ್ತು ಅರ್ದ ಪ್ರಾಣಿಗಳಂತಿದ್ದ ವಾನರರೂ ಸಹ ಈ ಅವತಾರಕ್ಕೆ ಸಮೀಪದಲ್ಲಿ ಬಂದು ನಿಲ್ಲುವ ಜೀವಿಗಳು.
ಸು. 2.4 ರಿಂದ 1.8 ಮಿಲಿಯನ್ ವರ್ಷಗಳ ಹಿಂದೆ ಪ್ರಾಗಿತಿಹಾಸದಲ್ಲಿ ಒಂದು ತಿರುವು ಪಡೆಯಿತು. ಅದುವೇ ಮಾನವನ ನಿಜವಾದ ಪೂರ್ವಜರೆನ್ನಬಹುದಾದ ಹ್ಯಾಂಡಿ ಮ್ಯಾನ್ ಗಳ ಅಸ್ತಿತ್ವ ಭೂಮಿಯ ಮೇಲೆ ರೂಪುಗೊಂಡಿದ್ದು. ಹ್ಯಾಂಡಿಮ್ಯಾನ್ ಗಳಿಂದ ವಿಕಾಸವಾದ ಜೀವಿಗಳೇ ಹೋಮೋ ಹ್ಯಾಬಿಲಸ್, ಹೋಮೋ ಎರಕ್ಟಸ್ ಮತ್ತು ಅಸ್ಟ್ರಲೋಪಿಥಿಕಸ್ ಗಳು. ನೋಡಲು ಕುಳ್ಳಗಿನ ದೇಹವಿದ್ದರೂ ಬುದ್ದಿಮತ್ತೆಯಲ್ಲಿ ಈ ಜೀವಿಗಳು ತಮ್ಮ ಹಿಂದಿನ ಜೀವಿಗಳಿಗಿಂತ ಅದೆಷ್ಟೋ ಸ್ಥರದಲ್ಲಿ ಮೇಲಿದ್ದವು. ಒಂದೆಡೆ ಗುಂಪಾಗಿ ನೆಲೆಸುವ, ಆಹಾರ ಸಂಗ್ರಹಿಸುವ ಗುಣವುಳ್ಳ ಈ ಜೀವಿಗಳು ಕುಳ್ಳ ವಾಮನವತಾರವನ್ನೇ ಹೋಲುತ್ತವೆ. ಶಕ್ತಿಯಿಂದ ಬಲಿಯನ್ನು ಸೋಲಿಸಲು ಅಸಾಧ್ಯವಾದಾಗ ತನ್ನ ಬುದ್ದಿಶಕ್ತಿಯಿಂದ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದವನು ವಾಮನ. ಈ ಜೀವಿಗಳು ಸಹ ತಮ್ಮ ದೈಹಿಕ ಶಕ್ತಿಯ ಇತಿಮಿತಿಗಳನ್ನು ಅರಿತವುಗಳಾದ್ದರಿಂದ ಬುದ್ದಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ತಮ್ಮ ಅಸ್ತಿತ್ವ ಕಾಪಾಡಿಕೊಂಡು ಭೂಮಿಯ ಮೇಲೆ ಬದುಕಿದ್ದವು.
ಪರಶುರಾಮ ರಾಮ ಮತ್ತು ಕೃಷ್ಣನ ಅವತಾರಗಳು ಕೈಯಲ್ಲಿ ಆಯುಧ ಹಿಡಿದ ಮೊದಲ ಅವತಾರಗಳಾಗಿವೆ, ಮಾನವ ಜೀವಿಗಳಲ್ಲಿ ಲೋಹಗಳ ಬಳಕೆ ಮತ್ತು ಆಯುಧಗಳ ಬಳಕೆ ಪ್ರಾರಂಭವಾಗಿದ್ದನ್ನು ಇದು ಸೂಚಿಸುತ್ತಿರಬಹುದು. ಇವುಗಳಲ್ಲಿ ಮೊದಲನೆಯದಾದ ಪರಶುರಾಮನ ಅವತಾರ ಉಡುಗೆ, ಆಹಾರ ಪದ್ಧತಿ ಅರಣ್ಯ ಜೀವನವನ್ನು ಹೋಲುತ್ತಿದ್ದು ನಾಗರಿಕತೆಗಳ ಪೂರ್ವ ಕಾಲದ ಜನಜೀವನದ ಮೇಲೆ ಬೆಳಕು ಚೆಲ್ಲುತ್ತವೆ. ಇಂದಿನ ಆಧುನಿಕ ಮಾನವನಿಗೆ ಹತ್ತಿರದ ಸಂಬಂಧಿಗಳೆನ್ನಬಹುದಾದ ಹೋಮೋ ನಿಯಾಂಡರ್ತಲ್ಸ್, ಹೋಮೋ ಸೇಪಿಯನ್ಸ್ ಈ ಹಂತದಲ್ಲಿ ಕಂಡುಬಂದ ಪ್ರಧಾನ ಬುದ್ಧಿ ಜೀವಿಗಳು. ನೋಡಲು ಇಂದಿನ ಆಧುನಿಕ ಮಾನವನಂತೆಯೇ ಇದ್ದ ಈ ಜೀವಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ತಮ್ಮ ಅನುಕೂಲಕ್ಕೆ ಬದಲಾಯಿಸಕೊಂಡು ಬದುಕಬಲ್ಲ ಚಾಣಾಕ್ಷತನ ಹೊಂದಿದ್ದವು. ಈ ಜೀವಿಗಳು ಬದುಕಿದ್ದ ಕಾಲವನ್ನು ಒಂದು ರೀತಿಯಲ್ಲಿ ನಾಗರಿಕತೆಗಳ ಪೂರ್ವದ ಕಾಲವೆನ್ನಬಹುದು, ಇನ್ನು ರಾಮ ಕೃಷ್ಣರ ಅವತಾರಗಳನ್ನು ನಾಗರಿಕತೆಗಳ ಉಗಮದ ಕಾಲಕ್ಕೆ ಹೋಲಿಸಬಹುದು. ಗುಂಪಾಗಿ ವಾಸ ಮಾಡುತ್ತಿದ್ದ ಮಾನವರು ನಾಗರಿಕ ಜೀವನದ ಶೈಲಿ ಕಂಡುಕೊಂಡು ರಾಜತ್ವಗಳನ್ನು, ಪಾಳೆಯಪಟ್ಟುಗಳನ್ನು, ಬುಡಕಟ್ಟುಗಳನ್ನು ಕಟ್ಟಿಕೊಂಡರು. ಯುದ್ಧ, ಹಬ್ಬ, ಸಂಸ್ಕøತಿ, ಆಚರಣೆ, ಧರ್ಮ ಮುಂತಾದ ಪರಿಕಲ್ಪನೆಗಳು ರೂಢಿಗೆ ಬಂದಿದ್ದೆ ಈ ಅವತಾರಗಳ ಅವಧಿಯಲ್ಲಿರಬಹುದೇ?
ಕಾಲಚಕ್ರದಲ್ಲಿ ಯಾವುದು ಔನ್ನತ್ಯಕ್ಕೇರುತ್ತದೋ ಅದು ಮತ್ತೇ ಅಧೋಗತಿಗೆ ಇಳಿಯದೇ ಇರಲಾರದು. ಪ್ರಾರಂಭದಲ್ಲಿ ಮನುಷ್ಯನ ಮೇಧಸ್ಸಿಗೆ, ತಾತ್ವಿಕತೆಗೆ, ವಿಜ್ಞಾನ, ತಾಂತ್ರಿಕತೆಗೆ ಹಿಡಿದ ಕನ್ನಡಿಯಾಗಿದ್ದ ನಾಗರಿಕತೆಗಳು ಮುಂದೆ ಅತಿರೇಕಕ್ಕೆ ಏರಿ ಅವಸಾನದ ಹಾದಿ ಹಿಡಿದಾಗ ಅದರ ಜೀರ್ಣೋದ್ಧಾರಕ್ಕಾಗಿ ಮಹಾಪುರುಷರ ಜನನವಾಗಬೇಕಾಗಿ ಬಂದಾಗ ಕಾಲ ಮತ್ತು ಪ್ರಕೃತಿ ಅಂತಹ ಸಿದ್ಧತೆಗಳನ್ನು ಮಾಡಿಕೊಳ್ಳುತ್ತವೆ. ಹಾಗೆ ಬಂದವರಲ್ಲಿ ಬುದ್ಧ ಮಹಾಶಯನೂ ಸಹ ಒಬ್ಬ, ಈ ಅವತಾರವು ತನ್ನಂತೆ ಸಮಾಜದ ಉದ್ದಾರಕ್ಕೆ ಹುಟ್ಟಿಕೊಂಡ ಯೇಸು, ಮಹಾವೀರ, ಜೊರಾಷ್ಟ್ರಿಯನ್ ರಂತಹ ಅನೇಕ ಪ್ರಸಿದ್ಧ ಪುರುಷರ ಪ್ರತಿನಿಧಿಯೂ ಆಗಿರುವ ಊಹೆಯಿದೆ.
ಬುದ್ಧಿ ಮಾತುಗಳಿಗೆ ಜಗತ್ತಿನ ದುಷ್ಟ ಶಕ್ತಿಗಳು ಜಗ್ಗದೇ ಹೋದಾಗ ಅನಿವಾರ್ಯವಾಗಿ ಆಯುಧ ಹಿಡಿಯಲೇ ಬೇಕಾಗುತ್ತದೆ. ಜಗತ್ತನ್ನು ಆಯುಧದಿಂದ ತಿದ್ದಲು ಹುಟ್ಟಿಕೊಂಡ ಅವತಾರವೇ ಕಲ್ಕಿ ಅವತಾರ.
ಈ ಮೊದಲೇ ಹೇಳಿದಂತೆ ಇಲ್ಲಿ ನಾನು ಹೇಳಿರುವ ಎಲ್ಲವೂ ಸತ್ಯವೆಂದು ಹೇಳಲು ಹೊರಟಿಲ್ಲ. ಹಾಗೆಯೇ ದಶಾವತಾರದ ಕತೆಗಳನ್ನು ಕೇವಲ ವೈಜ್ಞಾನಿಕ ದೃಷ್ಟಿಯಿಂದ ಜೀವ ವಿಕಾಸವು ಹೀಗೆ ಆಯಿತೆಂದು ಹೇಳುವ ವೈಜ್ಞಾನಿಕ ಗ್ರಂಥವೆಂದಾಗಲಿ, ಮುಂದೆ ಹೀಗೆ ನಡೆಯುತ್ತದೆಂದು ಹೇಳುವ ಜಾತಕ ಗ್ರಂಥವೆಂದಾಗಲಿ ಪ್ರತಿಪಾದಿಸುವುದಿಲ್ಲ. ನನ್ನ ಮೆದುಳಿಗೆ ಮೂಡಿದ ಆಲೋಚನೆಯ ಮೂಲಕ ಹೀಗೂ ಇದ್ದಿರಬಹುದಾದ ಸಾಧ್ಯತೆಯಿರಬಹುದೇ ಎಂಬುದನ್ನು ನಿಮ್ಮ ಮುಂದೆ ಚರ್ಚಿಸುತ್ತಾ ಸಾಗಿದ್ದೇನೆ. ಜಗತ್ತಿನಲ್ಲಿ ಯಾವುದು ಕಾರ್ಯಕಾರಣವಿಲ್ಲದೆ ನಡೆಯುವುದಿಲ್ಲ. ಜಗತ್ತಿನ ಪ್ರತಿ ವಿಷಯ, ಘಟನೆ, ವ್ಯಕ್ತಿ, ಸ್ಥಳ ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಒಂದು ಇನ್ನೊಂದಕ್ಕೆ ಪೂರಕವಾಗಿ ತಳಕು ಹಾಕಿಕೊಂಡಿರುತ್ತವೆ ಎನ್ನುವ ಅವ್ಯವಸ್ತಾ ಸಿದ್ಧಾಂತ (Chaos Theory) ಹೇಳುವುದು ಸಹ ಇದನ್ನೇ. ಹಾಗೆಯೇ ಈ ದಶಾವತಾರದ ಕತೆಗಳು ಸಹ ಎಲ್ಲಿಯೋ ಯಾವುದೋ ಮೇಧಸ್ಸಿನಿಂದ ಜಗತ್ತಿನ ಆಗುಹೋಗುಗಳನ್ನು ಕುರಿತ ರಚಿತವಾದ ರಚನೆಯೂ ಆಗಿರಬಹುದು. ಅಂತಿಮವಾಗಿ ಎಲ್ಲವೂ ಮೆದುಳಿನ ತರ್ಕಕ್ಕೆ ಬಿಟ್ಟಿದ್ದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ