ಅಮೇರಿಕಾ ಅಮೇರಿಕಾ - (ಪ್ರವಾಸ ಕಥನ)
ಅಮೇರಿಕಾ ಅಮೇರಿಕಾ - ನಾಗತೀಹಳ್ಳಿ ಚಂದ್ರಶೇಖರ್
ನಾವು ಮನುಷ್ಯರು ಭಾವನಾ ಜೀವಿಗಳು, ಸಂಘಜೀವಿಗಳು. ಸುಖ ನೆಮ್ಮದಿಯ ವಾತಾವರಣವನ್ನು ಅರಸುತ್ತಾ ಸಾಗುವವರು. ನಮಗೆ ಬೇಸರವಾದರೆ 4 ದಿನ ಬಂಧುಗಳ ಮನೆಗೋ, ಸ್ನೇಹಿತರ ಮನೆಗೋ ಹೋಗಿ ಬರುವುದುಂಟು ಈ ರೀತಿಯ ಸ್ಥಳ ಬದಲಾವಣೆ, ಪರಿಸರ ಬದಲಾವಣೆ ವ್ಯಕ್ತಿಗೆ ಒಂದು ರೀತಿಯ ನವೀನ ಚೈತನ್ಯವನ್ನು ಕೊಡಬಲ್ಲದು. ಪುಸ್ತಕದಿಂದ ದೊರೆಯುವ ಜ್ಞಾನ ಸ್ವತಃ ದೇಶಗಳನ್ನು ಸುತ್ತಿ ಅರಿಯುವ ಜ್ಞಾನ ಸಮಾನವಾದವುಗಳು ಎನ್ನುವರು. “ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬ ನಮ್ಮ ಹಿರಿಯರ ಅನುಭವದ ನುಡಿಯೇ ಪ್ರವಾಸದ ಮಹತ್ವವನ್ನು ತಿಳಿಸುತ್ತದೆ.
ಹೀಗೆ ಒಂದು ಕಾಲಕ್ಕೆ ಮನೋರಂಜಕವಾಗಿ ಬೆಳೆದುಕೊಂಡು ಬಂದ ಪ್ರವಾಸವು ನಂತರ ಜ್ಞಾನ ಅಭಿಪ್ಸೆಯ ಹಿನ್ನಲೆಯಲ್ಲಿ ಬೆಳೆವಣಿಗೆ ಹೊಂದಿ ಇತ್ತೀಚೆಗೆ ವ್ಯಾಪಾರ, ವ್ಯವಹಾರ ಸಾಂಸ್ಕøತಿಕ ವಿನಿಮಯಗಳ ಆಶಯಗಳನ್ನು ಹೊತ್ತು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಸೃಷ್ಟಿಯಾದ ಸಾಹಿತ್ಯವೇ ಪ್ರವಾಸ ಸಾಹಿತ್ಯ. ಯಾವುದೇ ಒಬ್ಬ ವ್ಯಕ್ತಿ ತನ್ನ ಪರಿಸರವನ್ನು ತೊರೆದು ಮತ್ತೊಂದು ಪರಿಸರಕ್ಕೆ ಹೋದಾಗ ಅಲ್ಲಾಗುವ ಅನುಭವಗಳನ್ನು ಅನುಭವಿಸಿ ಅರಗಿಸಿಕೊಂಡು ಆ ಸ್ಥಳಗಳ ವೈವಿಧ್ಯತೆಗಳನ್ನು, ಆನಂದಗಳನ್ನು ವ್ಯಜಿಸುವ, ಅಭಿವ್ಯಕ್ತಿಸುವ, ವಿವರಿಸುವ ಪ್ರಧಾನವೇ ಪ್ರವಾಸ ಕಥನ.
ನಾನು ನನ್ನ ಬಾಲ್ಯದಲ್ಲಿ ಕಂಡ ಅತ್ಯಂತ ನೆಚ್ಚಿನ ಮತ್ತು ನನ್ನ ಪ್ರಿಯವಾದ ಚಲನಚಿತ್ರ ಅಮೇರಿಕಾ ಅಮೇರಿಕಾ. ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಅಮೇರಿಕಾ ಜನಜೀವನ ವಿಧಾನ ವಿಶ್ವವನ್ನು ವ್ಯಾಪಿಸಿಕೊಳ್ಳುತಿದೆಯೇನೋ ಎಂಬ ಅನುಮಾನ ಕಾಡದೇ ಇರಲಾರದು. ಅಷ್ಟರಮಟ್ಟಿಗೆ ಅಲ್ಲಿನ ಆಧುನಿಕ ನೆಲೆಯೆಂದು ಗುರುತಿಸಿಕೊಂಡಿರುವ ಸಂಸ್ಕøತಿಯ ಅಂಶಗಳು ಇತರೆ ರಾಷ್ಟ್ರಗಳ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ.
ಸಿನಿಮಾ ಆಗಿಯೂ ಕನ್ನಡಿಗರ ಮನಸ್ಸಿನಲ್ಲಿ ಬೆಳೆದಿರುವ ಕೃತಿ ಅಮೇರಿಕಾ ಅಮೇರಿಕಾ. ಅಲೆಮಾರಿತನ ಮನೋಭವದ ನಾಗತೀಹಳ್ಳಿ ತುಂಬಾ ಕುತೂಹಲದಿಂದ 12 ಬಾರಿ ನೋಡಿರುವ ದೇಶ ಅಮೇರಿಕಾ. ಪ್ರತಿಯೊಂದು ಬಾರಿಯೂ ಒಂದೊಂದು ಹೊಸ ಹೊಸ ಸ್ಥಳಗಳನ್ನು ಮನಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. 240 ಪುಟಗಳ ಈ ಪ್ರವಾಸ ಕಥನ ಒಂದು ರೀತಿಯ ಆತ್ಮಕಥನ ಮಾದರಿಯಲ್ಲಿದೆ. ಈ ಕೃತಿಯಲ್ಲಿ ಅಮೇರಿಕಾದ ಅನುಭವವನ್ನು ಓತಪ್ರೇತವಾಗಿ ಹರಿದು ಬಿಟ್ಟಿದ್ದಾರೆ. ಅಮೇರಿಕಾ ನೋಡಲೇಬೇಕಾದ ದೇಶ. ಹತ್ತು ಬಾರಿ ಸುತ್ತಿ ಅಲ್ಲಿನ ಸಂಸ್ಕøತಿ, ನಾಗರೀಕತೆ, ಕಲೆ ಇವೆಲ್ಲವುಗಳನ್ನು ಅವರು ಅರಿತುಕೊಂಡವರು.
ತಮ್ಮ ಪುಟ್ಟ ಮಗಳ ಕನಸುಗಳೊಂದಿಗೆ ಆರಂಭವಾದ ಪ್ರವಾಸ ಕಥನ ಭಾರತಕ್ಕೆ ಬರುವವರೆಗೆ ಅವರ ಬರವಣಿಗೆ ಕುತೂಹಲದಿಂದ ಕೂಡಿದೆ. ನಾಗತೀಹಳ್ಳಿ ಅವರು ಪ್ರವಾಸ ಕಥನದಲ್ಲಿ ಹೇಳಬೇಕಾದುದ್ದನ್ನು ಮಾತ್ರ ಹೇಳುತ್ತಾರೆ. ಎಲ್ಲೂ ಬೇಸರ ಹೊಡೆಸುವುದಿಲ್ಲ. ಲಕ್ಸಂಬರ್ಗದಲ್ಲಿ ಇಡೀ ರಾತ್ರಿ ರೈಲ್ವೆ ಸ್ಟೇಷನ್ನಲ್ಲಿ ಕಳೆದು ಕೊಲೆಯೊಂದನ್ನು ಕಣ್ಣಾರೆ ನೋಡಿ ಇದಕ್ಕೆಲ್ಲಾ ಹೆದುರ್ತಿನಾ ಎಂಬ ಮಾತುಗಳು, ಏಕಾಂಗಿತನದಲ್ಲೂ ಉಲ್ಲಾಸಿತರಾಗಿರುವ, ಧೈರ್ಯದಿಂದ ಎದುರುಗೊಳ್ಳುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ ನಾಗತೀಹಳ್ಳಿಯವರದ್ದು, ಇದು ಅಲೆಮಾರಿಯ ಹಾಗೆ ಸದಾ ಸುತ್ತುವ ಹವ್ಯಾಸವುಳ್ಳ ಪ್ರವಾಸಿಗನಿಗೆ ಅತ್ಯವಶ್ಯಕವಾಗಿ ಇರಬೇಕಾದ ಮಾನಸಿಕ ಸ್ಥಿತಿಯಾಗಿದೆ.
ಅಮೇರಿಕಾ ವಿಶ್ವದ ಪ್ರತಿಭಾನ್ವಿತರನ್ನೆಲ್ಲಾ ತನ್ನೆಡೆಗೆ ಆಕರ್ಷಿಸುತ್ತಿರುವುದರ ರಹಸ್ಯ ಡಾಲರ್ ನಲ್ಲಿದೆ ಎಂದು ಸರ್ವಶಕ್ತಿ ಡಾಲರ್ ನ ಮಹಿಮೆಯನ್ನು ವಿವರಿಸಿದ್ದಾರೆ. ತನ್ನಲಿಗೆ ಬಂದವರನ್ನು ತನ್ನನ್ನೇ ಪ್ರೀತಿಸಿ ತನ್ನಲ್ಲಿಯೇ ಲೀನವಾಗುವಂತೆ ಮಾಡುವಂತಹ ಶಕ್ತಿ ಅಮೇರಿಕಾಕ್ಕಿದೆ ಎಂದು ಲೇವಡಿ ಮಾಡಿದ್ದಾರೆ. ಭಾರತವನ್ನು ಒಳಗೊಂಡಂತೆ ಇನ್ಯಾವುದೇ ರಾಷ್ಟ್ರಗಳು ಅಮೇರಿಕಾದ ಆಕರ್ಷಣೆಗೆ ಒಳಗಾಗದೆ ಇರಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಶ್ರೇಷ್ಠಮಟ್ಟದ ಸ್ಥಾನವನ್ನು ಈ ದೇಶಗಳಿಸಿಕೊಂಡು ವಿಶ್ವವನ್ನು ತನ್ನೆಡೆಗೆ ಆಕರ್ಷಿಸಿದೆ ಎನ್ನಬಹುದು. ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ವ್ಯಕ್ತಿ ಪ್ರಾಮಾಣಿಕತೆಯಲ್ಲಿ, ಸ್ವಚ್ಛತೆಯಲ್ಲಿ ಅಮೇರಿಕಾದವರು ಒಂದು ಆದರ್ಶವಾಗಬಲ್ಲರು ಎನ್ನುತ್ತಾ ಅಮೇರಿಕನ್ನರ ಗುಣಸ್ವಭಾವವನ್ನು ಹಿಡಿದಿರುವ ಪ್ರಯತ್ನ ಮಾಡಿದ್ದಾರೆ.
ಅಮೇರಿಕಾ ಪ್ರವಾಸ ಕಥನವನ್ನು ಓದುವ ಮನಸ್ಸಿಗೆ ಎದ್ದು ಕಾಣುವ ಅಂಶವೇನೆಂದರೆ, ಅಮೇರಿಕಾ ಸರ್ಕಾರ ಸರ್ವರಿಗೂ ಸೌಲಭ್ಯವನ್ನು ಒದಗಿಸುವ ರೀತಿ. ಅಮೇರಿಕಾ ಜಗತ್ತಿನ ಅತ್ಯಂತ ಆಧುನಿಕ ಮತ್ತು ಸಮೃದ್ಧವಾದ ರಾಷ್ಟ್ರ ನಿಜ. ಆದರೆ ಅದಕ್ಕಿಂತ ಮುಖ್ಯವಾಗಿ ತುಂಬಾ ಕಷ್ಟಪಟ್ಟು ದುಡಿಯುವ, ದೇಶವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಜನರಿರುವ ರಾಷ್ಟ್ರ, ಎಂದು ವಿವರಿಸಿ ಅಲ್ಲಿನ ಪ್ರಜೆಗಳ ದೇಶಾಭಿಮಾನ ಆ ದೇಶಕ್ಕೆ ಪೂರಕತೆ ನೀಡಿರುವುದನ್ನು ಸೂಕ್ಷ್ಮವಾಗಿ ಹೇಳುತ್ತಾರೆ. ಜಗತ್ತಿನ ಇತರ ರಾಷ್ಟ್ರಗಳ ಜನರು ಅರಿತು ಅಳವಡಿಸಿಕೊಳ್ಳಬೇಕಾದ ರಾಷ್ಟ್ರ ನಿರ್ಮಾಣ ಅಂಶಗಳನ್ನು ಸೂತ್ರೀಕರಿಸಿದ್ದಾರೆ. ಇಂತಹ ಅನೇಕ ಸಂಗತಿಗಳನ್ನು ನಾಗತೀಹಳ್ಳಿ ತಮ್ಮ ಕೃತಿ ಉದ್ದಕ್ಕೂ ಹೇಳುತ್ತಾ ಹೋಗಿದ್ದಾರೆ.
ಅಲ್ಲಿನ ಯಾಂತ್ರಿಕ ಬದುಕನ್ನು ವಿವರಿಸುತ್ತಾ ಸಾಮಾಜಿಕ ಜೀವನದ ಸಂಗತಿಗಳನ್ನು ವಿವರಿಸಿದ್ದಾರೆ. ಯಂತ್ರ ಮಾನವನು ಘಟಿಕೋತ್ಸವದ ಮುಖ್ಯ ಅತಿಥಿಯಾಗಿರುವುದನ್ನು ಹೇಳಿ ಆ ಮೂಲಕ ಯಂತ್ರದ ಮಹತ್ವ, ಅಮೇರಿಕನ್ನರು ಎಷ್ಟರ ಮಟ್ಟಿಗೆ ಯಾಂತ್ರಿಕತೆಯನ್ನು ತಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿಸಿಕೊಂಡಿದ್ದಾರೆ ಎಂಬುದನ್ನು ಹೇಳುತ್ತಾ ಯಂತ್ರಗಳ ವ್ಯಾಪಕ ಬಳಕೆಗೆ ಆಶ್ಚರ್ಯಪಡುತ್ತಾರೆ. ಎಲ್ಲವೂ ಯಂತ್ರಮಯ ಜಗತ್ತು. ಕೃತಿಯಲ್ಲಿ ಯಾಂತ್ರಿಕ ನಾಗರೀಕತೆಯನ್ನು ಅಭಿವೃದ್ಧಿಪಡಿಸುತ್ತ ಕೊನೆಗೆ ಜಗತ್ತಿಗೆ ಮಾನವನ ಅವಶ್ಯತೆ ಇಲ್ಲ ಎಂಬಂತೆ ಮಾಡಿದರೆ ಲಾಸ್ ಏಂಜಲೀಸ್ ಹೋಗಿ ಸಮುದ್ರವೇ ಉಳಿಯಬಹುದು ಎನ್ನುತ್ತಾರೆ. ಯಾಂತ್ರಿಕ ಜಗತ್ತಿನಿಂದಾಗುವ ಅಪಾಯದ ಮುನ್ಸೂಚನೆಯನ್ನು ಗುರುತಿಸುವ ಇವರ ಚಿಕಿತ್ಸಕ ಬುದ್ಧಿ ಮುಂದಿನ ತಲೆಮಾರಿನ ಬಗ್ಗೆ ಯೋಚಿಸುವಂತೆ ಮಾಡಿದೆ. ಅಮೇರಿಕಾದಲ್ಲಿ ಮನುಷ್ಯರು ಪರಸ್ಪರ ಮಾತನಾಡುವುದಕ್ಕಿಂತ ಯಂತ್ರಗಳು, ರೋಬೋಟ್ಗಳು ಪರಸ್ಪರ ಚೆನ್ನಾಗಿ ಮಾತನಾಡಿಕೊಳ್ಳುತ್ತವೆ ಎಂಬ ಲೇಖಕರ ಮಾತಿನಲ್ಲಿ ಜನತೆಯ ಸಾಮಾಜಿಕ ಬದುಕು ಅದರೊಳಗಿನ ಸಂಬಂಧದ ಕ್ರಿಯೆಯನ್ನು ಅರಿಯಬಹುದು.
ಮನುಷ್ಯ ಪ್ರೀತಿ, ಭಾವನಾತ್ಮಕತೆ ಮಾನವೀಯ ನೆಲೆಗಳು ಅಲ್ಲಿನ ಜನರ ಬದುಕಿನಲ್ಲಿ ಮಾಯವಾಗಿವೆ. ಅಮೇರಿಕನನ್ನರಿಗೆ ಮನುಷ್ಯರಿಗಿಂತ ಗೊಂಬೆಗಳು ಮತ್ತು ಸಾಕುಪ್ರಾಣಿಗಳು ಇಷ್ಟವಿರುವುದನ್ನು ದಾಖಲಿಸುತ್ತ ಯಾವಾಗ ಬೇಕಾದರೂ ಇವುಗಳಿಂದ ಬಿಡಿಸಿಕೊಳ್ಳಬಹುದೆಂಬ ಕಾರಣಕ್ಕೆ ಅವರು ಇಷ್ಟಪಡುತ್ತಾರೆನೋ ಎಂದು ಲೇಖಕರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಬಂಧನದಲ್ಲಿ ಬಂಧಿಯಾಗಿರುವುದು ಅಲ್ಲಿನ ದಂಪತಿಗಳಿಗೆ ಇಷ್ಟವಿಲ್ಲ. ಹಣ ಸಂಪಾದನೆಯ ಗುರಿಯನ್ನೇ ಮುಖ್ಯವಾಗಿಟ್ಟುಕೊಂಡಿರುತ್ತಾರೆ. ಇತರೆ ವಿಷಯಗಳ ದೃಷ್ಟಿ ಇಲ್ಲವೆಂದಲ್ಲ ಆದರೆ ಅವೆಲ್ಲಾ ಗೌಣ. ಎಲ್ಲವೂ ವ್ಯಾಪಾರಕ್ಕೆ ಒದಗಬೇಕು. ಇಲ್ಲಿನ ವ್ಯಾಪಾರಿ ಮನೋಧೊರಣೆಯನ್ನು ವಿವರಿಸುತ್ತಾ ಅವರ ವ್ಯಾಪಾರಿ ಮನೋಭಾವನೆಯನ್ನು ಲೇವಡಿ ಮಾಡಿದ್ದಾರೆ. ಅಮೇರಿಕನ್ನರು ಕೇಳುವುದು ಒಂದೆ ಪ್ರಶ್ನೆ, ಅದು ಡಾಲರ್ ಆಗುತ್ತದೆಯೇ? ಆರ್ಥಿಕ ನೆಲೆಯಿಂದಲೇ ಎಲ್ಲವನ್ನು ನೋಡುವ, ನಿರ್ಧರಿಸುವ ಬುದ್ಧಿ ಅಮೇರಿಕನ್ನರಿಗೆ ಜನ್ಮದಾತ ಎನಿಸುತ್ತದೆ. ವೈಯಕ್ತಿಕ ಸುಖಭೋಗದ ಕೋಟೆ ನಿರ್ಮಿಸಿಕೊಂಡು ಬದುಕುವ ಸ್ವಾರ್ಥಿಗಳಂತೆ ಕಾಣುವ ಅಮೇರಿಕನ್ನರು ತಮ್ಮ ಸ್ವಚ್ಛಂದ ಜೀವನ ಶೈಲಿಯಿಂದ ತಂದುಕೊಂಡಿರುವ ಅನೇಕ ಬಿಕ್ಕಟ್ಟುಗಳನ್ನು ನಿರೂಪಿಸಿದ್ದಾರೆ.
ಅಮೇರಿಕಾ ನೆಲದಲ್ಲಿರುವ ಭಾರತೀಯರ ಬಗ್ಗೆ ಮಾತನಾಡುತ್ತಾ ಹೊಸ ನೆಲದಲ್ಲಿ ಹಳೆಯ ಬೇರುಗಳನ್ನು ನೆಡಲು ಯತ್ನಿಸುವುದೊಂದು ಗುಂಪು, ಹೊಸ ನೆಲದಲ್ಲಿ ಹೊಸ ರೀತಿಯಲ್ಲೇ ಬೇರುಬಿಡುತ್ತದೆ ಎಂಬುದು ಇನ್ನೊಂದು ಗುಂಪು.
ಹೀಗೆ ಅಮೇರಿಕಾ ಎಂಬ ಶಕ್ತಿಯನ್ನು ವಿವರಿಸಿ ಅಲ್ಲಿನ ಯಾಂತ್ರಿಕ ಬದುಕು ಹಾಗೂ ಅಲ್ಲಿನ ಜನರಲ್ಲಿ ಮಾನವೀಯತೆ ಮರೆಯಾಗುತ್ತಿರುವ ಪರಿಯನ್ನು ಕೃತಿಯ ತುಂಬಾ ಲೇಖಕರು ಸವಿಸ್ತಾರವಾಗಿ ವಿವರಿಸುವುದು ಕಂಡುಬರುತ್ತದೆ.

ಬಹಳ ಒಳ್ಳೆಯ ವಿಶ್ಲೇಷಣೆ ನೀಡಿದ್ದೀರಿ TQ mam
ಪ್ರತ್ಯುತ್ತರಅಳಿಸಿ